ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರನ ಹೆಸರನ್ನು ವಿಪಕ್ಷ ನಾಯಕ ಆರ್. ಅಶೋಕ್ ಬಹಿರಂಗಗೊಳಿಸಿದ್ದು, ಕೊಳ್ಳೆಗಾಲ ಮೂಲದ ಈ ವ್ಯಕ್ತಿ ಹಿಂದೂ ಧರ್ಮದಿಂದ ಮತಾಂತರಗೊಂಡಿದ್ದಾನೆ. ಈತನನ್ನು ಮುಂದಿಟ್ಟುಕೊಂಡು ಹೂಡಿರುವ ಷಡ್ಯಂತ್ರವನ್ನು ಬಯಲು ಮಾಡಲು ಎನ್‌ಐಎ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಈವರೆಗೂ ಆತನ ಮಂಪರು ಪರೀಕ್ಷೆ ಮಾಡಿಲ್ಲ. ಇದುವರೆಗೆ ಒಂದು ಕೋಟಿ ರೂ.ಗೂ ಅಧಿಕ ಖರ್ಚಾಗಿದೆ. ಹಿಟಾಚಿ ಹಾಗೂ ಜೆಸಿಬಿಗಳನ್ನು ಬಳಸುತ್ತಿದ್ದಾರೆ. ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದಾರೆ. ಇದು ಪ್ರಾಯೋಜಿತವಾದ ಕೆಲಸವಾಗಿದೆ ಎಂದು ಆರೋಪಿಸಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರೇ, ನಿಮಗೆ ಈ ಮುಸುಕುದಾರಿಯ ಹೆಸರು ಗೊತ್ತಿದೆಯೇ ? ಜನರು ಆತನನ್ನು ಚಿನ್ನಯ್ಯ ಎಂದು ಕರೆಯುತ್ತಿದ್ದಾರೆ. ಈತನನ್ನು ಮುಂದಿಟ್ಟುಕೊಂಡು ಷಡ್ಯಂತ್ರ ಮಾಡಲಾಗುತ್ತಿದೆ. ಈ ತಂಡಕ್ಕೆ ವಿದೇಶದಿಂದ ಹಣ ಬರುತ್ತಿದೆ ಎಂಬ ಅನುಮಾನವಿದೆ ಎಂದು ಆರೋಪಿಸಿದ್ದಾರೆ.
ಸೌಜನ್ಯಾ ಕೊಲೆ ಪ್ರಕರಣದಲ್ಲಿ ನ್ಯಾಯ ದೊರಕಿಸಿಕೊಡುವುದಾದರೇ ನಾವೆಲ್ಲರೂ ಬೆಂಬಲ ನೀಡುತ್ತೇವೆ. ಆದರೆ ಆ ನೆಪದಲ್ಲಿ ಮಂಜುನಾಥ ಸ್ವಾಮಿಗೆ ಅಪಮಾನ ಮಾಡಲಾಗುತ್ತಿದೆ. ಈ ಹಿಂದ ತಿರುಪತಿಯನ್ನು ಮುಳುಗಿಸಲು ಯತ್ನಿಸಿದ್ದರು. ಅನಂತರ ಶಬರಿಮಲೆ, ಶನಿ ಸಿಂಗಾಪುರ ಕ್ಷೇತ್ರಗಳನ್ನು ಹಾಳು ಮಾಡಲು ಯತ್ನಿಸಿದ್ದಾರೆ.
ಸುಜಾತ ಭಟ್ ಎನ್ನುವವರು ಈಗ ಬಂದು, ಪುತ್ರಿ ಅನನ್ಯಾ ಅಪಹರಣ ಆಗಿದ್ದಾಳೆ ಎಂದು ದೂರು ನೀಡಿದ್ದಾರೆ. ಅವರ ಮನೆಯವರು ಸುಜಾತರಿಗೆ ಮಗಳೇ ಇಲ್ಲ ಎಂದು ಹೇಳಿದ್ದರು. ಜತೆಗೆ ಅನನ್ಯಾ ಎಂಬಿಬಿಎಸ್ ವಿದ್ಯಾರ್ಥಿಯೇ ಅಲ್ಲ ಎನ್ನಲಾಗಿದೆ. ಪೊಲೀಸರಿಗೆ ಇಂತಹ ನಿರ್ದೇಶನವನ್ನು ಯಾರು ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.


















