ನವದೆಹಲಿ: ಧರ್ಮಸ್ಥಳ ಪ್ರಕರಣಕ್ಕೆ (Dharmasthala Mass Burials Case) ಸಂಬಂಧಿಸಿದಂತೆ ಮಾನಹಾನಿಕರ ವರದಿಗಳ ಪ್ರಕಟಣೆ ತಡೆಯುವಂತೆ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಮರು ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಇಂದು(ಶುಕ್ರವಾರ) ಕರ್ನಾಟಕ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಮಾನಹಾನಿಕರ ವರದಿ ಪ್ರಸಾರಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ಮನಮೋಹನ್ ಅವರಿದ್ದ ದ್ವಿಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತ್ತು. ಆದಾಗ್ಯೂ ಈ ವಿಷಯದಲ್ಲಿ ಮಾಧ್ಯಮಗಳ ನಿರ್ಬಂಧದ ಅಗತ್ಯವಿದೆಯೇ ಎಂಬುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೊಹಟಗಿ, ದಿನೇ ದಿನೇ ಸುದ್ದಿ ವಾಹಿನಿಗಳು ಮತ್ತು ಸಾಮಾಜಿಕ ಮಾಧ್ಯಮಗಳು ಮಾನಹಾನಿಕರ ವರದಿಗಳನ್ನು ಪ್ರಕಟಿಸುತ್ತಿವೆ ಎಂದು ವಾದಿಸಿದರು. ಇದೇ ವೇಳೆ ಮಾನಹಾನಿಕರ ಎಂದು ಹೇಳಲಾದ ಇಂಟರ್ನೆಟ್ ಮೀಮ್ಸ್‌ಗಳ ಪೋಸ್ಟ್‌ಗಳ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಿದರು.
ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಇಂತಹ ಮಾನಹಾನಿಕರ ಪೋಸ್ಟ್‌ಗಳಿಗೆ ದೇವಾಲಯ ಎಂದಿಗಾದರೂ ಪರಿಹಾರ ಪಡೆಯಬಹುದು ಎಂದು ಹೇಳಿದೆ. ಆದಾಗ್ಯೂ, ಮಾಧ್ಯಮಗಳ ವಿರುದ್ಧ ನಿಗ್ರಹ ಹೇರಬೇಕೇ ಎಂದು ಪ್ರಶ್ನಿಸಿದೆ.
ವಿರಳ ಮತ್ತು ಅಪರೂಪದ ಪ್ರಕರಣಗಳಲ್ಲಿ ಮಾತ್ರ ಗ್ಯಾಗ್ ಆದೇಶಗಳನ್ನು ಹೊರಡಿಸಲಾಗುತ್ತದೆ. ಇಂತಹ ಆದೇಶ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತವೆ. ನಾವು ತಡೆಯಾಜ್ಞೆ ನೀಡಿದರೆ ಅನಾಮಿಕ ವ್ಯಕ್ತಿಯ ಹೇಳಿಕೆಯನ್ನು ಸಹ ವರದಿ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಮನಮೋಹನ್ ಹೇಳಿದ್ದಾರೆ.ಈ ವಿಷಯವನ್ನು ರಾಜ್ಯದ ವಿಚಾರಣಾ ನ್ಯಾಯಾಲಯವೇ ಪರಿಗಣಿಸಬಹುದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ವಿಚಾರಣಾ ನ್ಯಾಯಾಲಯದ ಮುಂದೆ ಅರ್ಜಿದಾರರು ಮತ್ತೆ ವಾದ ಮಂಡಿಸಲಿ. ನಾವು ಸ್ವತಂತ್ರ ದೇಶದಲ್ಲಿ ವಾಸಿಸುತ್ತಿದ್ದೇವೆ. ವಿಚಾರಣಾ ನ್ಯಾಯಾಲಯ ಈ ವಿಷಯದ ಬಗ್ಗೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಅವರು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ವಿಚಾರಣಾ ನ್ಯಾಯಾಲಯ ಮುಂದಿನ ವಿಚಾರಣೆಯ ದಿನದಿಂದ ಎರಡು ವಾರಗಳಲ್ಲಿ ಅರ್ಜಿಯನ್ನು ನಿರ್ಧರಿಸುವಂತೆ ನಾವು ನಿರ್ದೇಶಿಸುತ್ತೇವೆ. ಹೈಕೋರ್ಟ್ ಮಾಡುವ ಯಾವುದೇ ಅವಲೋಕನಗಳು ಹೊಸದಾಗಿ ತಡೆಯಾಜ್ಞೆ ಅರ್ಜಿಯನ್ನು ಪರಿಗಣಿಸುವಾಗ ವಿಚಾರಣಾ ನ್ಯಾಯಾಲಯದ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ನ್ಯಾಯಪೀಠ ಅಂತಿಮವಾಗಿ ತಮ್ಮ ಆದೇಶದಲ್ಲಿ ತಿಳಿಸಿದೆ.
ಧರ್ಮಸ್ಥಳ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಈ ಹಿಂದೆ ನೈರ್ಮಲ್ಯ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನೀಡಿದ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ಮಾಧ್ಯಮಗಳ ವರದಿಗಳಿಗೆ ಹೈಕೋರ್ಟ್ ತಡೆ ನೀಡಲು ನಿರಾಕರಿಸಿತ್ತು. ಬಳಿಕ ಧರ್ಮಸ್ಥಳ ದೇವಾಲಯದ ಕಾರ್ಯದರ್ಶಿ ಹರ್ಷೇಂದ್ರ ಕುಮಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.