ನವದೆಹಲಿ: ಧರ್ಮಸ್ಥಳದಲ್ಲಿ ಹಲವು ಅಸಹಜ ಸಾವಿಗೀಡಾದ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದ ಮಾಧ್ಯಮ ವರದಿಗಳ ಮೇಲೆ ವಿಧಿಸಲಾಗಿದ್ದ ನಿಷೇಧವನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ನ ಇತ್ತೀಚಿನ ಆದೇಶವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ಇಂದು(ಶುಕ್ರವಾರ) ವಿಚಾರಣೆ ನಡೆಸಲಿದೆ.
ಧರ್ಮಸ್ಥಳ ದೇವಸ್ಥಾನ ಸಂಸ್ಥೆಯ ಕಾರ್ಯದರ್ಶಿಯಾದ ಹರ್ಷೇಂದ್ರ ಕುಮಾರ್ ಡಿ. ಅವರು ಈ ಮೇಲ್ಮನವಿಯನ್ನು ಸಲ್ಲಿಸಿದ್ದಾರೆ. “ಸುಮಾರು 8,000 ಯೂಟ್ಯೂಬ್ ವಾಹಿನಿಗಳು ದೇವಸ್ಥಾನದ ಆಡಳಿತದ ವಿರುದ್ಧ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡುತ್ತಿವೆ’ ಎಂದು ವಾದಿಸಿದ ಅರ್ಜಿದಾರರ ಪರ ವಕೀಲರು, ಶುಕ್ರವಾರವೇ ಈ ಬಗ್ಗೆ ವಿಚಾರಣೆ ನಡೆಸುವಂತೆ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ನ್ಯಾಯಪೀಠಕ್ಕೆ ಮನವಿ ಮಾಡಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದ ವಿಚಾರಣೆ ಶುಕ್ರವಾರವೇ ನಡೆಯುವ ಬಗ್ಗೆ ಈಗಾಗಲೇ ನಿಗದಿಯಾಗಿದೆ ಎಂದು ನ್ಯಾಯಪೀಠ ತಿಳಿಸಿತು. ಬೆಂಗಳೂರು ಸಿವಿಲ್ ಕೋರ್ಟ್ ಈ ಮೊದಲು ಹೊರಡಿಸಿದ್ದ ಮಾಧ್ಯಮ ನಿರ್ಬಂಧವನ್ನು ಆ.1ರಂದು ಹೈಕೋರ್ಟ್ ರದ್ದುಗೊಳಿಸಿತ್ತು.