ಧರ್ಮಸ್ಥಳ : ದೇವಸ್ಥಾನ ಮಾಹಿತಿ ಕೇಂದ್ರದಿಂದ ಬರುತ್ತಿದ್ದ ಸೂಚನೆಯ ಮೇರೆಗೆ ಅಸಹಜ ಸಾವಿಗೀಡಾಗಿದ್ದ ಶವಗಳನ್ನು ಸಹಚರರೊಂದಿಗೆ ಹೂಳಲಾಗಿತ್ತು ಎಂದು ರಾಷ್ಟ್ರೀಯ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದ ಸಾಕ್ಷಿ ದೂರುದಾರ, ಶವಗಳು ಹೇಗಿರುತ್ತಿದ್ದವು ಎನ್ನುವುದನ್ನೂ ಹೇಳಿಕೊಂಡಿದ್ದಾನೆ.
ರಾಷ್ಟ್ರೀಯ ಸುದ್ದಿ ಸಂಸ್ಥೆ ಇಂಡಿಯಾ ಟುಡೇ ಸಂಸ್ಥೆ ನೀಡಿದ ಸಂದರ್ಶನದಲ್ಲಿ, ಹೂತಿದ್ದ ಶವಗಳ ಸಾವಿಗೆ ನಿಖರ ಕಾರಣ ಹೇಳಲು ಸಾಧ್ಯವಾಗದೇ ಹೋದರೂ, ಹೆಚ್ಚಿನ ಶವಗಳ ಮೇಲೆ ಹಿಂಸೆ ಮತ್ತು ಲೈಂಗಿಕ ದೌರ್ಜನ್ಯದ ಕುರುಹುಗಳಿತ್ತು. ಆದರೆ ಬಲಿಪಶುಗಳು ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾರೆಯೇ ಎಂಬುದನ್ನು ವೈದ್ಯಕೀಯ ತಜ್ಞರು ಮಾತ್ರ ಪರಿಶೀಲಿಸಬಹುದು. ನಮಗೆ ಹೇಳುವುದಕ್ಕೆ ಸಾಧ್ಯವಿಲ್ಲ. ಸಣ್ಣಪುಟ್ಟ ಕುರುಹುಗಳಿದ್ದವು ಎಂದು ಸಾಕ್ಷಿ ದೂರುದಾರ ಹೇಳಿದ್ಧಾನೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲಾ ವಯಸ್ಸಿನ ದೇಹಗಳನ್ನು ಹೂತಿದ್ದೇವೆ. ಅವರಲ್ಲಿ ಹೆಚ್ಚಿನವರು ಮಹಿಳೆಯವರು. 100 ದೇಹಗಳಲ್ಲಿ ಸುಮಾರು 90 ಶವಗಳು ಮಹಿಳೆಯರಿದ್ದು ಇದ್ದವು ಎಂದಿದ್ದಾನೆ.
“ಸ್ಥಳಗಳು ಬದಲಾದವು, ಸಾಕ್ಷ್ಯಗಳು ನಾಶವಾಗಿವೆ :”
ಸವೆತ, ಅರಣ್ಯ ಬೆಳವಣಿಗೆ ಮತ್ತು ನಿರ್ಮಾಣ ಕಾರ್ಯಗಳಿಂದಾಗಿ ಕೆಲವು ಸಮಾಧಿ ಸ್ಥಳಗಳು ಕಳೆದುಹೋಗಿವೆ ಎಂದು ಸಾಕ್ಷಿ ದೂರುದಾರ ಹೇಳಿಕೊಂಡಿದ್ದಾನೆ. “ಮೊದಲು ನಾವು ಗುರುತಿಸಬಹುದಾದ ಹಳೆಯ ರಸ್ತೆ ಇತ್ತು, ಆದರೆ ಜೆಸಿಬಿ ಕೆಲಸದ ನಂತರ, ನಮಗೆ ಕೆಲವು ಸ್ಥಳಗಳನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಆಗ ಕಾಡು ವಿರಳವಾಗಿತ್ತು, ಈಗ ಅದು ದಟ್ಟವಾಗಿದೆ”. ನಾನು ಮನುಷ್ಯ. ನಾನು ತೋರಿಸಿದ ಎರಡು ಸ್ಥಳಗಳಲ್ಲಿ ಪತ್ತೆಯಾಗಿವೆ. ಸಾಧ್ಯವಾದಷ್ಟು ನನ್ನ ನೆನಪಿಗೆ ಇರುವಷ್ಟು ಸ್ಥಳಗಳನ್ನು ಸೂಚಿಸುತ್ತಿದ್ದೇನೆ. ಕೆಲವು ಕಡೆ ನೀರಿನ ಒರತೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾನೆ.
ಇಲ್ಲಿಯವರೆಗೆ, ಎಸ್.ಐ.ಟಿ ಆತ ಗುರುತಿಸಿದ 13 ಸ್ಥಳಗಳಿಂದ ಒಂದು ಕಡೆ ಭಾಗಶಃ ಅಸ್ಥಿಪಂಜರದ ಅವಶೇಷಗಳನ್ನು ವಶಪಡಿಸಿಕೊಂಡಿದೆ, ಆದರೆ ಅದು ಪುರುಷನದ್ದು ಎಂದು ಹೇಳಲಾಗಿದೆ.
100 ಕ್ಕೂ ಹೆಚ್ಚು ಸಮಾಧಿಗಳನ್ನು ಮಾಡಲಾಗಿದೆ ಎಂದು ಹೇಳಿಕೊಂಡರೂ ಇಷ್ಟು ಕಡಿಮೆ ಶವಗಳು ಏಕೆ ಪತ್ತೆಯಾಗಿವೆ ಎಂಬ ಪ್ರಶ್ನೆಗೆ, “ಜನರು ಏನು ಬೇಕಾದರೂ ಹೇಳಲಿ. ಆದರೆ ಸಮಾಧಿ ಮಾಡಿದವರು ನಾವು ಮತ್ತು ನಾವು ಸತ್ಯವನ್ನು ಹೇಳುತ್ತಿದ್ದೇವೆ” ಎಂದು ಸಾಕ್ಷಿ ದೂರುದಾರ ಹೇಳಿದ್ದಾನೆ.
“ನಾನು ಎಸ್‌ಐಟಿಯನ್ನು ನಂಬುತ್ತೇನೆ, ಆದರೆ ಎಸ್‌ಐಟಿ ನನ್ನನ್ನು ನಂಬುತ್ತಿಲ್ಲ”
“ನಾನು ವಿಶೇಷ ತನಿಖಾ ತಂಡವನ್ನು ನಂಬುತ್ತೇನೆ, ಆದರೆ ಅವರು ನನ್ನನ್ನು ನಂಬುವಂತೆ ಕಾಣುತ್ತಿಲ್ಲ. ನಾನು ನನಗೆ ನೆನಪಿರುವಂತೆ ಸಮಾಧಿ ಮಾಡಲಾದ ಜಾಗಗಳನ್ನು ತೋರಿಸುತ್ತಿದ್ದೇನೆ, ಆದರೆ ಇಲ್ಲಿ ಇಷ್ಟು ವರ್ಷಗಳಲ್ಲಿ ಜಾಗ ಬದಲಾಗಿದೆ. ನಾನು ನನ್ನಿಂದ ಆಗುವಷ್ಟು ಪ್ರಯತ್ನ ಪಡುತ್ತಿದ್ದೇನೆ. ಅಲ್ಲದೆ ಜೆಸಿಬಿ ಇನ್ನಷ್ಟು ಅಗಲ ಅಗೆದು ಅವಶೇಷ ಮರುಪಡೆಯಲು ಪ್ರಯತ್ನಿಸಬೇಕು” ಎಂದಿದ್ದಾನೆ.
“ಅಂದು ನನ್ನೊಂದಿಗೆ ಇದ್ದ ಉಳಿದವರನ್ನೂ ಎಸ್‌ಐಟಿ ಕರೆಯಲಿ, ಎಲ್ಲರೂ ಸತ್ಯ ಹೇಳಲಿ. ಒಂದು ವೇಳೆ ಎಲ್ಲರನ್ನೂ ಕರೆದರೆ ಈ ಪ್ರಕ್ರಿಯೆ ಸುಲಭವಾಗಿ ಮತ್ತು ವೇಗವಾಗಿ ನಡೆಯುತ್ತದೆ” ಎಂದಿದ್ದಾನೆ.


















