ಮಂಗಳೂರು : ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಹಿಂದೆ ನಡೆದಿವೆ ಎನ್ನಲಾದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಕುರಿತು ದಾಖಲಾದ ಪ್ರಕರಣದ ಸಾಕ್ಷಿ ದೂರುದಾರನ ಹೇಳಿಕೆ ಮತ್ತು ಸ್ಥಳ ಮಹಜರು ಸೇರಿ ಇನ್ನಿತರ ಮಾಹಿತಿ ಕಲೆಹಾಕುವುದಕ್ಕೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ತನಿಖಾ ಪ್ರಕ್ರಿಯೆ ಮುಂದುವರಿಸಿದ್ದಾರೆ. ಈ ನಡುವೆ ಎಸ್.ಐ.ಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರ ನೇಮಕಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಟ್ಟ ಪ್ರಕರಣದ ತನಿಖೆ ನಡೆಸಲು ಎಸ್.ಐ.ಟಿ ಮುಖ್ಯಸ್ಥನನ್ನಾಗಿ ಪ್ರಣವ್ ಮೊಹಂತಿ ಅವರನ್ನು ನೇಮಕ ಮಾಡಿರುವ ರಾಜ್ಯ ಸರ್ಕಾರದ ನಡೆಗೆ ಮಾಜಿ ಡಿವೈಎಸ್ ಪಿ ಅನುಪಮಾ ಶೆಣೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶೆಣೈ, ಪ್ರಣವ್ ಮೊಹಂತಿ ಅವರು ಅತ್ಯಾಚಾರ ಹಾಗೂ ನರಹತ್ಯೆ ಬಗ್ಗೆ ತನಿಖೆಗೆ ಸೂಕ್ತ ವ್ಯಕ್ತಿಯಲ್ಲ. ಮೊಹಂತಿ ನೇಮಕದಲ್ಲಿ ಕೆ.ಜೆ. ಜಾರ್ಜ್ ಕೈವಾಡವಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಮೊಹಂತಿ ನೇಮಕದಿಂದ ಪೊಲೀಸರ ನೈತಿಕ ಬಲ ಕುಗ್ಗಿದೆ ಎಂದವರು ಆರೋಪಿಸಿದ್ದಾರೆ.
ಡಿವೈಎಸ್‌ಪಿ ಪಿ. ಗಣಪತಿ ಆತ್ಮಹತ್ಯೆ ಮಾಡಿಕೊಂಡಾಗ ಕೆ.ಜೆ ಜಾರ್ಜ್ ಜೊತೆಗೆ ಐಪಿಎಸ್ ಅಧಿಕಾರಿ ಎ.ಎಂ ಪ್ರಸಾದ್ ಹಾಗೂ ಪ್ರಣವ್ ಮೊಹಂತಿಯವರ ಹೆಸರನ್ನೂ ಕೂಡ ಉಲ್ಲೇಖಿಸಿದ್ದರು ಎಂದು ಅನುಪಮಾ ಆರೋಪ ಹೊರಿಸಿದ್ದಾರೆ.
ದಯಾನಂದ ಅಥವಾ ಡಿಜಿಪಿ ಡಾ. ಕೆ ರಾಮಚಂದ್ರ ರಾವ್ ಅವರನ್ನು ತನಿಖಾ ತಂಡದ ಉಸ್ತುವಾರಿಯನ್ನಾಗಿ ನೇಮಕ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.