ಮಂಗಳೂರು : ಧರ್ಮಸ್ಥಳ ಪ್ರಕರಣದ ತನಿಖಾಧಿಕಾರಿಯು ಭೇದಿಸಿರುವ ಅತ್ಯಾಚಾರ, ಕೊಲೆ, ಶವಗಳ ಹೊರತೆಗೆಯುವಿಕೆಯ ಪ್ರಕರಣಗಳೆಷ್ಟು? ಈ ಸ್ವರೂಪದ ಪ್ರಕರಣಕ್ಕೆ ಅಗತ್ಯವಿರುವ ಪರಿಣತಿಯನ್ನು ಈ ಅಧಿಕಾರಿಯು ಹೊಂದಿದ್ದಾರೆಂದು ಪೋಲಿಸ್ ಇಲಾಖೆಯು ಹೇಳುತ್ತಿದೆಯೇ? ಎಂದು ಸುಪ್ರೀಂ ಕೋರ್ಟ್ ವಕೀಲ ಕೆ ವಿ ಧನಂಜಯ್ ಅವರು ಪ್ರಶ್ನಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು ಧರ್ಮಸ್ಥಳದಲ್ಲಿ ಕೊಲೆ ಮತ್ತು ಅತ್ಯಾಚಾರಕ್ಕೊಳ ಗಾದ ನೂರಾರು ಮೃತದೇಹಗಳನ್ನು ಹೂತು ಹಾಕಲಾಗಿದೆಯೆನ್ನುವ ಪ್ರಕರಣದಂತಹ ಇನ್ನೊಂದು ಪ್ರಕರಣ ಕಳೆದ 100 ವರ್ಷಗಳಲ್ಲಿ ನ್ಯಾಯಾಲಯದ ತೀರ್ಪುಗಳಲ್ಲಿ ಕಾಣಸಿಗುವುದಿಲ್ಲ. ಈ ಪ್ರಕರಣದಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರವು ತನಿಖೆಗೆಂದು ನೇಮಿಸಿರುವ ಅಧಿಕಾರಿಯ ವಯಸ್ಸು ಸುಮಾರು 29. ಅವರು ಧರ್ಮಸ್ಥಳ ಪೋಲೀಸ್ ಠಾಣೆಯ ಸಬ್ ಇನ್ಸೆಕ್ಟರ್ ಆಗಿದ್ದಾರೆ. ಈ ಅಧಿಕಾರಿಯು ಭೇದಿಸಿರುವ ಅತ್ಯಾಚಾರ, ಕೊಲೆ, ಶವಗಳ ಹೊರತೆಗೆಯುವಿಕೆಯ ಪ್ರಕರಣಗಳೆಷ್ಟು? ಈ ಸ್ವರೂಪದ ಪ್ರಕರಣಕ್ಕೆ ಅಗತ್ಯವಿರುವ ಪರಿಣತಿಯನ್ನು ಈ ಅಧಿಕಾರಿಯು ಹೊಂದಿದ್ದಾರೆಂದು ಪೋಲಿಸ್ ಇಲಾಖೆಯು ಹೇಳುತ್ತಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಕಳಕಳಿ ಇದ್ದಲ್ಲಿ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಮಿಸಲಾದ ತನಿಖಾಧಿಕಾರಿಯ ಬಗ್ಗೆ ಸರ್ಕಾರವು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು. ಸ್ಪಷ್ಟನೆಯ ನಂತರ, ತನಿಖೆಯ ಪ್ರಗತಿ ಕುರಿತಾಗಿ ಚರ್ಚಿಸಬಹುದು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಕರಣವನ್ನು ದಾಖಲಿಸುವುದಾಗಿ ದೂರುದಾರನ ವಕೀಲರು ಸಾರ್ವಜನಿಕವಾಗಿ ಪ್ರಕಟಿಸಿದ್ದು 22 ಜೂನ್ 2025ರಂದು. ದೂರನ್ನು ದಕ್ಷಿಣ ಕನ್ನಡ ಪೊಲೀಸರಿಗೆ ವಕೀಲರು ನೀಡಿದ್ದು ದಿನಾಂಕ 3 ಜುಲೈ ರಂದು. ಆ ರಾತ್ರಿಯೇ ದೂರಿನ ಪರಿಷ್ಕೃತ ಪ್ರತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಲಾಯಿತು. ಎಫ್ ಐ ಆರ್ ದಾಖಲಿಸಿದ್ದು 4 ಜುಲೈರಂದು. ಇದರ ಪರಿಷ್ಕೃತ ಪ್ರತಿಯನ್ನೂ ಸಾರ್ವಜನಿಕವಾಗಿ ಪ್ರಕಟಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಕೊಲೆ ಪ್ರಕರಣಗಳಲ್ಲಿ ಕಾರ್ಯಾನುಭವ ಮತ್ತು ಪರಿಣತಿ ಪಡೆದ ಅಧಿಕಾರಿಗಳೇ ತನಿಖೆ ಮಾಡಿದ್ದರೂ, ಪ್ರತಿ ನೂರು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗುವ ಪ್ರಕರಣಗಳು 9 ಮಾತ್ರ. ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರು ನಗರದ ಸೆಷನ್ಸ್ ನ್ಯಾಯಾಲಯಗಳು ಕಳೆದ 7 ವರ್ಷಗಳಲ್ಲಿ ನೀಡಿರುವ ತೀರ್ಪುಗಳನ್ನು ಅಧ್ಯಯನ ನಡೆಸಿರುವ ನಮ್ಮ ತಂಡ ಈ ಮಾಹಿತಿಯನ್ನು ಕಂಡುಕೊಂಡಿದೆ ಎಂದು ಅವರು ಪ್ರಕಟನೆಯಲ್ಲಿ ಉಲ್ಲೇಖಿಸಿದ್ದಾರೆ.



















