ಧರ್ಮಸ್ಥಳ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ.ಟಿ ತನಿಖೆ ಮುಂದುವರಿದಿದೆ. ಈ ನಡುವೆ ಸಾಕ್ಷಿ ದೂರುದಾರ ರಾಷ್ಟ್ರೀಯ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದಾನೆ. ಸಂದರ್ಶನದಲ್ಲಿ ಸಾಕ್ಷಿ ದೂರುದಾರ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣದ ಬಗ್ಗೆಯೂ ಪ್ರಸ್ತಾಪಿಸಿದ್ದಾನೆ.
ರಾಷ್ಟ್ರೀಯ ಸುದ್ದಿಸಂಸ್ಥೆ ಇಂಡಿಯಾ ಟುಡೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಸಾಕ್ಷಿ ದೂರುದಾರ, “2012 ರಲ್ಲಿ ಧರ್ಮಸ್ಥಳದ ಬಳಿಯ ನಿರ್ಜನ ಪ್ರದೇಶದಲ್ಲಿ 17 ವರ್ಷದ ಸೌಜನ್ಯ ಎಂಬ ಬಾಲಕಿಯ ಕೊಲೆ ಮತ್ತು ಅತ್ಯಾಚಾರದ ಬಗ್ಗೆಯೂ ದೂರುದಾರ ಮಾತನಾಡಿದ್ದಾನೆ.
“ಆಕೆಯ ಕೊಲೆಯಾದ ರಾತ್ರಿ ನನಗೆ ಕರೆ ಬಂದಿತ್ತು. ನಾನು ಎಲ್ಲಿದ್ದೇನೆ ಎಂದು ಕೇಳಿದ್ದರು. ನಾನು ರಜೆಯ ಮೇಲೆ ನನ್ನ ಊರಿನಲ್ಲಿದ್ದೇನೆ ಎಂದು ಹೇಳಿದೆ. ರಜೆ ಮಾಡಿದ್ದಕ್ಕೆ ಅವರು ನನ್ನ ಮೇಲೆ ಕೂಗಾಡಿದ್ದರು. ಮರುದಿನ, ನಾನು ಕೊಲೆಯಾದ ಹುಡುಗಿಯ ಶವವನ್ನು ನೋಡಿದ್ದೇನೆ” ಎಂದು ಆತ ಹೇಳಿಕೊಂಡಿದ್ದಾನೆ.
“ಕನಸಿನಲ್ಲಿ ಅಸ್ಥಿಪಂಜರ”
ಎರಡು ದಶಕಗಳ ನಂತರ ಧರ್ಮಸ್ಥಳಕ್ಕೆ ಮರಳಿದ್ದೇನೆ ಎಂದು ಆತ ಹೇಳಿದ್ದಾನೆ. “ನನಗೆ ಅಸ್ಥಿಪಂಜರದ ಅವಶೇಷಗಳ ಬಗ್ಗೆ ಕನಸು ಬೀಳುತ್ತಿತ್ತು. ನನಗೆ ತಪ್ಪಿತಸ್ಥ ಭಾವನೆ ಕಾಡುತ್ತಿತ್ತು, ಆದ್ದರಿಂದ ನಾನು ಧರ್ಮಸ್ಥಳಕ್ಕೆ ಹಿಂತಿರುಗಿದೆ” ಎಂದು ಆತ ಹೇಳಿಕೊಂಡಿದ್ದಾನೆ.
ಧರ್ಮಸ್ಥಳದ ದೇವಸ್ಥಾನಕ್ಕೆ ಕೆಟ್ಟ ಹೆಸರು ತರುವ ಉದ್ದೇಶ ಇಲ್ಲ. ಶವಗಳನ್ನು ಪತ್ತೆಹಚ್ಚುವುದು ಮತ್ತು ಅಂತಿಮ ವಿಧಿವಿಧಾನಗಳನ್ನು ನಡೆಸುವುದು ಏಕೈಕ ಉದ್ದೇಶ ಎಂದು ಆತ ಒತ್ತಿ ಹೇಳಿಕೊಂಡಿದ್ದಾನೆ. “ಶವಗಳನ್ನು ಎಲ್ಲಿ ಹೂಳಲಾಗಿದೆ ಎಂಬುದನ್ನು ನಾನು ತೋರಿಸಲು ಬಯಸುತ್ತೇನೆ. ನನಗೆ ಓಡಿಹೋಗಲು ಯಾವುದೇ ಕಾರಣವಿಲ್ಲ. ನಾನು ಇದನ್ನು ಮುಗಿಸಿ ನನ್ನ ಕುಟುಂಬದೊಂದಿಗೆ ಇರಲು ಬಯಸುತ್ತೇನೆ” ಎಂದು ದೂರುದಾರ ಹೇಳಿಕೊಂಡಿದ್ದಾನೆ.
ಆತ ಶವಗಳಿಂದ ಆಭರಣಗಳನ್ನು ದೋಚುತ್ತಿದ್ದ, ದೇವಸ್ಥಾನಕ್ಕೆ ಕಳಂಕ ತರಲು ಯತ್ನ ಮಾಡುತ್ತಿದ್ದಾನೆ ಎಂಬ ಆರೋಪವನ್ನು ಅಲ್ಲಗಳೆದಿದ್ದಾನೆ. “ನನಗೆ ಕಳ್ಳತನದಿಂದ ಬದುಕು ನಡೆಸುವಂತಿದ್ದರೆ, ನಾನು ಯಾಕೆ ದೇವಸ್ಥಾನದಲ್ಲಿ ಕೆಲಸ ಮಾಡಬೇಕು ಮತ್ತು ಸೇವೆ ಮಾಡಬೇಕು? ನಾನು ಹಿಂದೂ, ಪರಿಶಿಷ್ಟ ಜಾತಿಗೆ ಸೇರಿದವನು” ಎಂದು ಆತ ಹೇಳಿಕೊಂಡಿದ್ದಾನೆ.



















