ನವ ದೆಹಲಿ/ಬೆಂಗಳೂರು : ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡುವುದಕ್ಕೆ ವಿದೇಶಿ ಹಣ ಬಂದಿದೆ ಎಂಬ ಸಂಶಯ ವ್ಯಕ್ತವಾದ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಈಗ ತನಿಖೆಗೆ ಮುಂದಾಗಿದೆ.
ಧರ್ಮಸ್ಥಳದ ವಿರುದ್ಧ ನಡೆದ ಷಡ್ಯಂತ್ರವನ್ನು ಸಿಬಿಐ ಅಥವಾ ಎನ್‍ಐಎ ಸಂಸ್ಥೆಯಿಂದ ತನಿಖೆ ನಡೆಸಿದರೆ ಮಾತ್ರ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಸೇರಿ ಆಡಳಿತ ಕಾಂಗ್ರೆಸ್ ಸರ್ಕಾರದ ನಾಯಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್.ಐ,ಟಿ ರಚನೆ ಮಾಡಿದ್ದೇವೆ. ಎಸ್.ಐ.ಟಿ ತನಿಖೆ ಮಾಡುತ್ತಿದೆ ಎಂದು ಹೇಳಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆಗೆ ಬಂದಿದೆ. ವಿದೇಶಿ ಎನ್.ಜಿ.ಒ ಗಳಿಂದ ಹಣ ಫಂಡಿಂಗ್ ಆಗಿದೆಯೇ ಎಂಬ ಅನುಮಾನದ ಹಿನ್ನೆಲೆಯಲ್ಲಿ ಒಡನಾಡಿ ಹಾಗೂ ಸಂವಾದ ಸಂಸ್ಥೆಗಳ ಬ್ಯಾಂಕಿಂಗ್ ಖಾತೆಗಳ ಬಗ್ಗೆ ಇ.ಡಿ ಮಾಹಿತಿ ಸಂಗ್ರಹ ಮಾಡುವ ಕೆಲಸ ಆರಂಭಿಸಿದೆ.
ಕಾನೂನು ಬಾಹಿರವಾಗಿ ಹಣ ಬಂದಿರುವ ಆರೋಪ ಬಂದಿರುವ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು, ಕಳೆದ 5 ವರ್ಷಗಳ ವಹಿವಾಟುಗಳ ಬಗ್ಗೆ ಮಾಹಿತಿ ನೀಡುವಂತೆ ಕೆಲ ಬ್ಯಾಂಕ್‌ಗಳಿಗೆ ಪತ್ರ ಬರೆದಿದೆ. ವಿದೇಶದಿಂದ ಹಣ ಬಂದಿರುವ ಬಗ್ಗೆ ಮಾಹಿತಿ ಹಾಗೂ ಅದಕ್ಕೆ ಸಂಬಂಧಿಸಿದ ಪ್ರತಿಗಳು, ವಿದೇಶದಿಂದ ಹಣ ಬಂದರೆ ಅದಕ್ಕೆ ಕಾರಣವೇನು ಎಂಬುದನ್ನು ತಿಳಿಸುವಂತೆ ಬ್ಯಾಂಕ್ ಗಳಿಗೆ ಇ.ಡಿ ಅಧಿಕಾರಿಗಳು ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸಂಸದ ಕೋಟಶ್ರೀನಿವಾಸ ಪೂಜಾರಿ ಪತ್ರ !
ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದರು.
ಧರ್ಮಸ್ಥಳ ದೇವಸ್ಥಾನಕ್ಕೆ ದೇಶ ವಿದೇಶಗಳಿಂದ ಭಕ್ತರು ಬರುತ್ತಾರೆ. ಹೀಗಾಗಿ ದೇಗುಲದ ಪಾವಿತ್ರ್ಯತೆ ಉಳಿಸಬೇಕಿದೆ. ದೇವಾಲಯದ ಗೌರವಕ್ಕೆ ಧಕ್ಕೆ ಆಗಬಾರದು. ಅವರಿಗೆ ವಿದೇಶದಿಂದ ಹಣ ಬಂದ ಬಗ್ಗೆ ದೂರುಗಳು ಕೇಳಿಬಂದಿವೆ. ಹೀಗಾಗಿ ಇ.ಡಿ ಮೂಲಕ ತನಿಖೆ ನಡೆಸಲು ನಾನು ಒತ್ತಾಯ ಮಾಡಿದ್ದೇನೆ. ಭಕ್ತರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ನಾನು ವ್ಯಕ್ತಿಗತವಾಗಿ ಪತ್ರ ಬರೆದಿಲ್ಲ. ಕರ್ನಾಟಕ ಸರ್ಕಾರ ಎಸ್ಐಟಿ ಮೂಲಕ ತನಿಖೆಗೆ ಸೂಚಿಸಿದ್ದಕ್ಕೆ ಸ್ವಾಗತವಿದೆ. ಆದರೆ, ಅನಾಮಧೇಯ ಭೀಮನಿಂದ ದಾರಿ ತಪ್ಪಿಸುವ ಕೆಲಸ ಆಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದರು.


















