ಶಿವಮೊಗ್ಗ : ಹಿಂದುಗಳ ಪುಣ್ಯಕ್ಷೇತ್ರ ಧರ್ಮಸ್ಥಳ ಪ್ರಕರಣ ಇಂದು ದೇಶದ ಗಮನವನ್ನು ಸೆಳೆದಿದ್ದು, ಧರ್ಮಸ್ಥಳ ಕ್ಷೇತ್ರ, ಹಿಂದೂ ಧರ್ಮ ಹಾಗೂ ಹೆಗ್ಗಡೆಯವರ ಮೇಲೆ ಅಪಪ್ರಚಾರ ಮಾಡುವ ಉದ್ದೇಶದಿಂದ ಕೆಲವರು ಷಡ್ಯಂತ್ರ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಕರ್ನಾಟಕದ ಮೂಲೆ ಮೂಲೆಗಳಿಂದ ಧರ್ಮಸ್ಥಳಕ್ಕೆ ಹಾಗೂ ಹಿಂದೂ ಧರ್ಮದ ಧರ್ಮ ಕ್ಷೇತ್ರವನ್ನು ಉಳಿಸಲು ಈಗಾಗಲೇ ಬೆಂಬಲ ಸಿಕ್ಕಿದೆ. ಶಿವಮೊಗ್ಗದ ರಾಷ್ಟ್ರಭಕ್ತ ಬಳಗದಲ್ಲಿಂದಲೂ ಕೂಡ 250 ಕಾರುಗಳ ಮೂಲಕ ನಾವು ಧರ್ಮಸ್ಥಳಕ್ಕೆ ಹೊರಟಿದ್ದೇವೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳಕ್ಕೆ ನಾವುಗಳು ಹೋಗಿ ವೀರೇಂದ್ರ ಹೆಗಡೆಯವರಿಗೆ ಧೈರ್ಯವನ್ನು ಹೇಳಲಿದ್ದು, ಧರ್ಮಸ್ಥಳವನ್ನು ನಾವು ಪ್ರಾಣ ಕೊಟ್ಟು ಉಳಿಸುತ್ತೇವೆ ಎಂಬ ತೀರ್ಮಾನ ಮಾಡಿಕೊಂಡು ನಾವು ಹೋಗುತ್ತಿದ್ದೇವೆ. ಖಂಡಿತ ಧರ್ಮ ಗೆಲ್ಲುತ್ತದೆ ಅಧರ್ಮ ಸೋಲತ್ತದೆ ಎಂಬ ವಿಶ್ವಾಸದಲ್ಲಿದ್ದೇವೆ. ಈ ಷಡ್ಯಂತರದ ಹಿಂದೆ ಯಾವ ಸಂಸ್ಥೆ ಇದೆ, ಯಾರ ಕೈವಾಡ ಇದೆ ಎಂಬುದು ತನಿಖೆ ಆಗಬೇಕು. ಅದು ಎಸ್ಐಟಿ ತನಿಖೆಯಿಂದ ಸಾಧ್ಯವಿಲ್ಲ, ಇದನ್ನ ಎನ್ಐಎಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು, ಬೋವಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ವಿಚಾರವಾಗಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ರವಿಕುಮಾರ್ ಅಷ್ಟೇ ಅಲ್ಲ ರಾಜ್ಯ ಸರ್ಕಾರವೇ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮೊನ್ನೆ ಅಷ್ಟೇ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಬಂದು ಹೇಳಿದ್ದರು ಹಿಂದೆ ಯಾವ ಸರ್ಕಾರದಲ್ಲೂ ಈ ರೀತಿಯ ಬ್ರಷ್ಟಾಚಾರ ಇರಲಿಲ್ಲ ಈ ಸರ್ಕಾರದಲ್ಲಿ ನಡೆಯುತ್ತಿದೆ. 60% ಕಮಿಷನ್ ಈ ಬಗ್ಗೆ ಒಬ್ಬ ಮಂತ್ರಿ ಹಾಗೂ ಮುಖ್ಯಮಂತ್ರಿ ಕೂಡ ಅದರ ಬಗ್ಗೆ ಉತ್ತರ ಕೊಟ್ಟಿಲ್ಲ, ಸುಳ್ಳು ಎಂದು ಸಹ ಹೇಳಿಲ್ಲ ಎಂದು ಕಿಡಿಕಾರಿದ್ದಾರೆ.
ವಾಲ್ಮೀಕಿ ನಿಗಮದ ಪ್ರಾಮಾಣಿಕ ಅಧಿಕಾರಿ ಒಬ್ಬರು ಆತ್ಮಹತ್ಯೆ ಮಾಡಿಕೊಂಡರು. ಈ ರೀತಿ ಭ್ರಷ್ಟಾಚಾರದಲ್ಲಿ ತುಂಬಿಹೋಗಿರುವ ಸರ್ಕಾರಕ್ಕೆ ಏನು ಹೇಳಿದರೂ ತಪ್ಪು. ಜನ ಚುನಾವಣೆಗಾಗಿ ಕಾಯುತ್ತಿದ್ದಾರೆ ಮುಂದಿನ ಚುನಾವಣೆಯಲ್ಲಿ ಅವರಿಗೆ ಪಾಠ ಕಲಿಸುತ್ತಾರೆ. ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಅಡ್ರೆಸ್ ಇಲ್ಲದ ಹಾಗೆ ಹೋಗುತ್ತದೆ. ನನ್ನ ಮೇಲೆ ಆರೋಪ ಬಂದಾಗ ನಾನು ತನಿಖೆ ಮಾಡಿ ಎಂದು ಸ್ಪಷ್ಟವಾಗಿ ಹೇಳಿದ್ದೆ. ಅದರಿಂದ ನಾನು ಯಾವುದೇ ತಪ್ಪಿತಸ್ಥನಲ್ಲದೆ ಈಗ ಹೊರ ಬಂದಿದ್ದೇನೆ. ಆದರೆ ಅವರು ಯಾವುದೇ ತನಿಖೆ ಗಳಿಗೂ ತಯಾರಿಲ್ಲ ಬಹಿರಂಗವಾಗಿ ಗುತ್ತಿಗೆದಾರ ಸಂಘ ಹೇಳಿರಬೇಕಾದರೆ ತನಿಖೆಗೂ ಮುಂದಾಗುವುದಿಲ್ಲ, ಮಾತೂ ಆಡುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.