ಬೆಂಗಳೂರು: ಧರ್ಮಸ್ಥಳದಲ್ಲಿ ಇನ್ನೆಷ್ಟು ಗುಂಡಿ ತೆಗೆಯುತ್ತೀರಿ? ಸತ್ಯ ಹೊರಬರಬೇಕು ಎನ್ನುವುದರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ, ತನಿಖೆಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳ ಮೇಲೆ ಅವಹೇಳನ ನಿರಂತರವಾಗಿ ನಡೆಯುತ್ತಿದೆ. ಹೀಗಾಗಿ ತನಿಖೆ ಎಲ್ಲಿಯವರೆಗೆ ಬಂದಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕಿದೆ. ಧರ್ಮಸ್ಥಳದ ಪಾವಿತ್ರ್ಯತೆ ಕಾಪಾಡುವ ದೃಷ್ಟಿಯಲ್ಲಿ ಸರ್ಕಾರ ಎಚ್ಚರಿಕೆಯ ಕ್ರಮಗಳನ್ನು ವಹಿಸಬೇಕೆಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ.ಸುನೀಲ್ ಕುಮಾರ್ ವಿಧಾನಸಭೆಯಲ್ಲಿ ಒತ್ತಾಯಿಸಿದ್ದಾರೆ.
ಕಲಾಪದ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಸುನೀಲ್ ಕುಮಾರ್, ಕಳೆದ 12-13 ದಿನಗಳಿಂದ ಧರ್ಮಸ್ಥಳವನ್ನು ಕೇಂದ್ರವಾಗಿಟ್ಟುಕೊಂಡು ಅಸಹಜ ಸಾವಿನ ಬಗ್ಗೆ ಎಸ್‌ಐಟಿ ತನಿಖೆ ಮಾಡುತ್ತಿರುವುದನ್ನು ಸ್ವಾಗತಿಸುತ್ತೇನೆ. ಸತ್ಯಾಸತ್ಯತೆ ಹೊರಬರಬೇಕು ಎಂಬ ವಿಚಾರದಲ್ಲಿ ನಮ್ಮ ಯಾರದ್ದೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಆದರೆ ತನಿಖೆಯ ನೆಪದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನು ಅವಹೇಳನ ಮಾಡುವ ಪ್ರಕ್ರಿಯೆಗಳು ಕಳೆದ ಕೆಲ ದಿನಗಳಿಂದ ನಿರಂತರವಾಗಿ ನಡೆಯುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ತನಿಖೆ ಯಾವ ಹಂತದಲ್ಲಿದೆ ತಿಳಿಸಿ”
ಸಾಮಾಜಿಕ ಜಾಲತಾಣ ಹಾಗೂ ಕೆಲವರ ಹೇಳಿಕೆಗಳನ್ನು ನೋಡಿದಾಗ ಇಡೀ ಧರ್ಮಸ್ಥಳವನ್ನು ಗುರಿ ಮಾಡಿರುವ ಪ್ರವೃತ್ತಿ ಇಲ್ಲಿ ಎದ್ದು ಕಾಣುತ್ತಿದೆ. ನಮ್ಮೆಲ್ಲರ ನಂಬಿಕೆ, ಶ್ರದ್ಧೆ ಮೇಲೆ ದೊಡ್ಡ ಆಘಾತ ಸೃಷ್ಟಿಯಾಗಿದೆ. 15-16 ಸ್ಥಳಗಳಲ್ಲಿ ಉತ್ಖನನ ನಡೆಸಿದರೂ ಏನೂ ಪತ್ತೆಯಾಗಿಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿಯುತ್ತಿದೆ. ರಾಜ್ಯದಲ್ಲಿರುವ ಊಹಾಪೋಹಾಗಳಿಗೆ ಸರ್ಕಾರ ತೆರೆ ಎಳೆಯಬೇಕು. ತನಿಖೆ ಇನ್ಯಾವುದೋ ದಿಕ್ಕಿನ ಕಡೆಗೆ ಹೋಗುವ ಮೊದಲು ತನಿಖೆ ಯಾವ ಹಂತದಲ್ಲಿ ನಡೆಯುತ್ತಿದೆ ಎನ್ನುವುದನ್ನು ತಿಳಿಸಬೇಕು. ಮಧ್ಯಂತರ ವರದಿಯನ್ನು ಸಲ್ಲಿಸುವಂತೆ ಮಾಡಿ ಎಂದು ರಾಜ್ಯ ಆಡಳಿತ ಪಕ್ಷಕ್ಕೆ ಸುನೀಲ್ ಒತ್ತಾಯಿಸಿದ್ದಾರೆ.
ಯಾರ್ಯಾರೋ ಬಂದು ಹೇಳುತ್ತಾರೆ ಎಂದು ಎಷ್ಟೆಷ್ಟೋ ಅಗೆದು ನೋಡುವುದಕ್ಕೆ ಸಾಧ್ಯವಿಲ್ಲ. ಧಾರ್ಮಿಕ ನಂಬಿಕೆ ಮೇಲೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇನ್ನೆಷ್ಟು ಗುಂಡಿ ತೆಗೆಯುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
“ಎಸ್‌ಐಟಿ ವರದಿ ಬಂದ ಬಳಿಕ ಉತ್ತರ”
ಸುನೀಲ್ ಕುಮಾರ್ ಶೂನ್ಯವೇಳೆಯಲ್ಲಿ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಗೃಹಸಚಿವ ಡಾ. ಜಿ. ಪರಮೇಶ್ವರ್, ಬಂದ ದೂರನ್ನು ಪೊಲೀಸರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಆ ಭಾಗದ ಜನಸಮುದಾಯದ ಒತ್ತಾಯ ಮೇರೆಗೆ ಜು. 19ರಂದು ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದೇವೆ, ತನಿಖೆ ನಡೆಯುತ್ತಿದೆ. ಅದು ಪೂರ್ಣ ಆಗಬೇಕು. ಅದಕ್ಕೂ ಕಾಲಮಿತಿ ಇರುತ್ತದೆ. ನೂರಾರು ಗುಂಡಿ ಅಗೆಯಲು ಸಾಧ್ಯವಿಲ್ಲ. ಒಂದು ಹಂತಕ್ಕೆ ತಲುಪಿದ ಮೇಲೆ ಎಸ್‌ಐಟಿ ವರದಿ ಕೊಡುತ್ತದೆ. ಅನಂತರ ಉತ್ತರ ಕೊಡುತ್ತೇನೆ ಎಂದಷ್ಟೇ ಸದನಕ್ಕೆ ಪ್ರತಿಕ್ರಿಯಿಸಿದ್ದಾರೆ.



















