ಮಂಗಳೂರು : ಧರ್ಮಸ್ಥಳದಲ್ಲಿ ನೂರಾರು ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಎನ್‌ಐಎಗೆ ವಹಿಸುವಂತೆ ತೀವ್ರ ಆಗ್ರಹ ಕೇಳಿ ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಸನಾತನ ಸಂತ ನಿಯೋಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.
ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ 8 ಸ್ವಾಮೀಜಿಗಳ ನಿಯೋಗವು ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿ ಕಚೇರಿಯಲ್ಲಿ ಭೇಟಿ ಮಾಡಿ, ಧರ್ಮಸ್ಥಳ ಪ್ರಕರಣ ಕುರಿತು ಗೃಹ ಸಚಿವರ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಎಸ್ ಐ ಟಿ ತನಿಖೆ ಬಗ್ಗೆ ಆಕ್ಷೇಪವಿಲ್ಲ, ಆದರೆ ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಹೊರ ಬರಬೇಕು ಎಂದು ಆಗ್ರಹಿಸಿದ್ದಾರೆ.
ಅಮಿತ್ ಶಾ ಅವರೆ ಖುದ್ದು ಸ್ವಾಮೀಜಗಳಿಂದ ಸುಮಾರು ಒಂದು ಗಂಟೆಗಳ ಕಾಲ ಧರ್ಮಸ್ಥಳ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಉತ್ಖನನ ಕಾರ್ಯಾಚರಣೆ ಧರ್ಮಸ್ಥಳದ ಬಾಹುಬಲಿ ಬೆಟ್ಟ ತಲುಪಿದ್ದು, ಕೇವಲ ಧರ್ಮಸ್ಥಳ ಮಾತ್ರವಲ್ಲ ಬೇರೆ ಬೇರೆ ಕ್ಷೇತ್ರಗಳಾದ ಶಬರಿಮಲೆ, ತಿರುಪತಿ ಕ್ಷೇತ್ರದ ಮೇಲೂ ಇಂತಹ ಅಪಪ್ರಚಾರ ನಡೆದಿದೆ ಎಂದು ಗೃಹ ಸಚಿವರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಂದೂ ಧರ್ಮ ಕ್ಷೇತ್ರಗಳನ್ನು ಸಂಶಯದಿಂದ ನೋಡುವ ರೀತಿ ಷಡ್ಯಂತ್ರ ನಡೆಯುತ್ತಿದ್ದು, ಯಾರು ದೇವಸ್ಥಾನಗಳಿಗೆ ಹೋಗದಂತೆ ಮಾಡುವ ಹುನ್ನಾರವಿದು ಅತೀ ಶೀಘ್ರವಾಗಿ ಎನ್ ಐ ಎ ತನಿಖೆಗೆ ವಹಿಸಲು ಮನವಿ ಮಾಡಿದ್ದಾರೆ.


















