ಮಂಗಳೂರು : ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ʼಶವ ಹೂಳಿದʼ ಪ್ರಕರಣದ ತನಿಖೆಗೆ ಸರ್ಕಾರ ಎಸ್.ಐ.ಟಿ ರಚಿಸಿರುವುದನ್ನು ವಿವಿಧ ಸಂಘಟನೆಗಳು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರರೂ ಸ್ವಾಗತಿಸಿದ್ದಾರೆ.
ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿರುವ ದೂರು ರಾಷ್ಟ್ರ ಮಟ್ಟದಲ್ಲಿ ವಾದ-ಪ್ರತಿವಾದಕ್ಕೆ ಕಾರಣವಾಗಿತ್ತು. ಪ್ರಕರಣದ ಪ್ರಾಮಾಣಿಕ ತನಿಖೆ ಆಗಬೇಕೆನ್ನುವುದು ಎಲ್ಲರ ಬಯಕೆಯಾಗಿತ್ತು. ಆದ್ದರಿಂದ ಎಸ್.ಐ.ಟಿ ವಹಿಸಿರುವುದು ಉತ್ತಮ ನಿರ್ಧಾರ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ವಕ್ತಾರ ಕೆ. ಪಾರ್ಶ್ವನಾಥ್ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳದಲ್ಲಿ ಹಲವು ವರ್ಷಗಳ ಕಾಲ ಉದ್ಯೋಗಿಯಾಗಿದ್ದೆ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ʼಧರ್ಮಸ್ಥಳ ಗ್ರಾಮದಲ್ಲಿ ಮಹಿಳೆಯರು, ಯುವತಿಯರು ಸೇರಿ ಅನೇಕ ಕೊಲೆಗಳು ನಡೆದಿದ್ದು, ಹತ್ಯೆಯಾದವರ ಪೈಕಿ ಹಲವರ ಮೃತ ದೇಹವನ್ನು ನಾನೇ ಹೂತುಹಾಕಿದ್ದೇನೆʼ ಎಂದು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ಬಳಕ ಇಬ್ಬರು ವಕೀಲರ ಜೊತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ತೆರಳಿ ಹೇಳಿಕೆ ದಾಖಲಿಸಿದ್ದ.
ಈ ಬಳಿಕ ಹಲವು ಸಂಘಟನೆಗಳು, ಸೌಜನ್ಯ ಪರ ಹೋರಾಟಗಾರರು ಪೊಲೀಸರ ಮೇಲೆ ಒತ್ತಡ ಹೇರಿದ್ದರು. ಹೇಳಿಕೆ ಕೊಟ್ಟ ವ್ಯಕ್ತಿಯ ಮಂಪರು ಪರೀಕ್ಷೆ, ಸುಳ್ಳುಪತ್ತೆ ಪರೀಕ್ಷೆ ಮತ್ತು ಬೆರಳಚ್ಚು ಸಂಗ್ರಹಕ್ಕೆ ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.