ಬೆಳ್ತಂಗಡಿ/ಬೆಂಗಳೂರು : ಧರ್ಮಸ್ಥಳದಲ್ಲಿ ಅಸಹಜ ಸಾವಿಗೀಡಾಗಿರುವ ಶವಗಳನ್ನು ಅಕ್ರಮವಾಗಿ ಹೂತಿಟ್ಟಿದ್ದೇನೆಂದು ಹೇಳಿದ್ದ ಮುಸುಕುದಾರಿ ಚಿನ್ನಯ್ಯನನ್ನು ಎಸ್.ಐ.ಟಿ ಪೊಲೀಸರು ಈಗಾಗಲೇ ಬಂಧಿಸಿ, ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಚಿನ್ನಯ್ಯ ಎಸ್.ಐ.ಟಿ ಪೊಲೀಸರ ಮುಂದೆ ಬಾಯ್ಬುಟ್ಟಿದ್ದು, ತನ್ನೊಂದಿಗೆ ನಿರಂತರವಾಗಿ ಆರು ಮಂದಿ ಸಂಪರ್ಕದಲ್ಲಿದ್ದರು, ಏನೇನು ಮಾಡಬೇಕು, ಏನೇನು ಹೇಳಬೇಕು ಎನ್ನುವುದನ್ನು ನಿರ್ದೇಶಿಸುತ್ತಿದ್ದರು ಎನ್ನುವುದನ್ನು ಆತ ಹೇಳಿಕೊಂಡಿರುವುದಾಗಿ ಈಗ ಲಭ್ಯ ಮೂಲಗಳಿಂದ ತಿಳಿದು ಬಂದಿದೆ.
ಧರ್ಮಸ್ಥಳದ ಶವ ಹೂತಿಟ್ಟ ಪ್ರಕರಣಕ್ಕೆ ಕ್ಷಣಕ್ಷಣಕ್ಕೂ ರೋಚಕ ತಿರುವು ದೊರಕುತ್ತಿದ್ದು, ಆರೋಪಿ ಚಿನ್ನಯ್ಯನಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯವಸ್ಥಿತವಾಗಿ ತರಬೇತಿ ನೀಡಲಾಗಿತ್ತಂತೆ. ಆ ಆರು ಮಂದಿಯ ತಂಡ ಚಿನ್ನಯ್ಯನನ್ನು ಮಾನಸಿಕವಾಗಿ ಪ್ರತಿದಿನವೂ ತಯಾರು ಮಾಡುತ್ತಿತ್ತಂತೆ. ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಏನು ಹೇಳಬೇಕು ? ನ್ಯಾಯಾಧೀಶರ ಮುಂದೆ ಏನು ಹೇಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡುತ್ತಿತ್ತಂತೆ ಆ ಆರು ಮಂದಿಯ ತಂಡ. ಎಸ್.ಎಸ್. ಟಿ ಅಧಿಕಾರಿಗಳು ಕೇಳಿರುವ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು, ಹೇಗೆ ಪ್ರತಿಕ್ರಿಯಿಸಬೇಕು, ಉತ್ಖನನ ಕಾರ್ಯ ನಡೆಯುವಾಗ ಹೇಗೆ ವರ್ತಿಸಬೇಕು ಎಂಬೆಲ್ಲದರ ಬಗ್ಗೆ ವ್ಯವಸ್ಥಿತವಾಗಿ ಹೇಳಿಕೊಡುತ್ತಿತ್ತೆಂದು ಚಿನ್ನಯ್ಯ ಈಗ ಎಸ್.ಐ.ಟಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆಂದು ತಿಳಿದು ಬಂದಿದೆ.
ಮಾತ್ರವಲ್ಲದೇ, ಮುಸುಕುದಾರಿ ಚಿನ್ನಯ್ಯನ ಕೈಗೆ ಬುರುಡೆ, ಮೂಳೆ ಕೊಟ್ಟು ಎಸ್.ಪಿ ಕಚೇರಿಗೆ ಕಳುಹಿಸಿದ್ದೇ ಆ ಆರು ಜನರ ತಂಡವಂತೆ. ಹಂತಹಂತವಾಗಿ ಚಿನ್ನಯ್ಯನಿಗೆ ಹಣ ಒದಗಿಸಿ, ಬೇಕಾದ ಎಲ್ಲಾ ಸವಲತ್ತು ಒದಗಿಸಿ ಆತನನ್ನು ಮಾನಸಿಕವಾಗಿ ತಯಾರು ಮಾಡುತ್ತೆಂದು ವಿಚಾರಣೆಯ ವೇಳೆ ಚಿನ್ನಯ್ಯ ಈ ರೀತಿಯ ಸ್ಪೋಟಕ ಹೇಳಿಕೆ ನೀಡಿದ್ದಾನೆ.
ಪ್ರಕರಣ ದಾಖಲಾಗುತ್ತಿದ್ದಂತೆ ಆ ಆರು ಮಂದಿ ನಾಪತ್ತೆಯಾಗಿದ್ದು, ಆ ಆರು ಮಂದಿಯ ವಶಕ್ಕೆ ಎಸ್.ಐ.ಟಿ ತಂಡ ತಯಾರಾಗಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.