ಉಡುಪಿ: ಧರ್ಮಸ್ಥಳ ಪ್ರಕರಣದ ಸಾಕ್ಷಿ ದೂರುದಾರ ಮುಸುಕುದಾರಿಯನ್ನು ಎಸ್.ಐ.ಟಿ ಪೊಲೀಸರು ಬಂಧಿಸಿರುವುದು ನಿಜ. ಆತ ಪೊಲೀಸ್ ಕಸ್ಟಡಿಯಲ್ಲಿ ಇದ್ದಾನೆ. ತನಿಖೆ ನಡೆಯುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ವರದಿಗಾರರೊಂದಿಗೆ ಇಂದು (ಶನಿವಾರ, ಆ.23) ಮಾತನಾಡಿದ ಪರಮೇಶ್ವರ್, ಇದರ ಹಿಂದೆ ಯಾವ ಜಾಲ ಇದೆ ಎನ್ನುವುದನ್ನು ಪತ್ತೆ ಮಾಡುತ್ತೇವೆ. ಎಸ್‌ಐಟಿ ತನಿಖೆಯ ಮುಕ್ತಾಯವಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಉತ್ಖನನ ಕಾರ್ಯದ ಸಂದರ್ಭದಲ್ಲಿ ಪತ್ತೆಯಾಗಿರುವ ಕುರುಹುಗಳ ತನಿಖೆ ನಡೆಯುತ್ತದೆ ಎಂದು ತಿಳಿಸಿದ್ದಾರೆ.
ಎಸ್‌ಐಟಿ ತನ್ನ ಅಂತಿಮ ವರದಿ ಸಲ್ಲಿಸುವವರಿಗೆ ಏನು ಹೇಳಲಾಗದು. ಯಾವ ಸೆಕ್ಷನ್ ನಲ್ಲಿ ಬಂಧಿಸಲಾಗಿದೆ ಎನ್ನುವುದು ಎಸ್‌ಐಟಿಯವರಿಗೆ ಗೊತ್ತು. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಎಸ್‌ಐಟಿಯಿಂದ ಪಡೆಯುತ್ತೇನೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದಿದ್ದಾರೆ.
ಸುಜಾತ ಭಟ್ ವಿಚಾರ ಕೂಡ ತನಿಖೆಯಲ್ಲಿದೆ. ತನಿಖೆಯ ವರದಿಗಳು ಬರುವವರೆಗೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯಾವುದೇ ವಿಚಾರ ಬಹಿರಂಗಗೊಂಡರೆ ಎಸ್‌ಐಟಿ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಪರಮೇಶ್ವರ್ ಹೇಳಿದ್ದಾರೆ.


















