ನಟಿ ನಯನತಾರಾ ಹಾಗೂ ನಟ ಧನುಷ್ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಟಾಕ್ ವಾರ್ ನಡೆಯುತ್ತಿದೆ. ಈಗ ಧನುಷ್ ಅವರು ನಟಿಯ ವಿರುದ್ಧ ಗುಡುಗಿದ್ದಾರೆ.
24 ಗಂಟೆಯೊಳಗೆ ವಿಡಿಯೋ ತೆಗೆದುಹಾಕದಿದ್ದರೆ ಕಾನೂನು ಕ್ರಮ ಜರುಗಿಸುವುದಾಗಿ ತಮ್ಮ ವಕೀಲರ ಮೂಲಕ ಧನುಷ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ನಯನತಾರಾ ಜೀವನಾಧಾರಿತ ಸಾಕ್ಷ್ಯಚಿತ್ರದಲ್ಲಿ ಧನುಷ್ ನಿರ್ಮಾಣದ ನಾನೂಮ್ ರೌಡಿ ಥಾನ್ ಚಿತ್ರದ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ. ಅದನ್ನು 24 ಗಂಟೆಗಳ ಒಳಗೆ ತೆಗೆದುಹಾಕಬೇಕು. ಇಲ್ಲವಾದರೆ ಸದ್ಯ ಕೋರಿರುವ ಪರಿಹಾರದ ಜೊತೆಗೆ ಮುಂದಿನ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಧನುಷ್ ಪರ ವಕೀಲರು ಎಚ್ಚರಿಸಿದ್ದಾರೆ.
ಸಾಕ್ಷ್ಯಚಿತ್ರದಲ್ಲಿ ಬಳಸಲಾದ ದೃಶ್ಯಗಳನ್ನು ಫೋನ್‌ಗಳಲ್ಲಿ ಚಿತ್ರೀಕರಿಸಲಾಗಿದೆ ಎಂಬ ನಯನತಾರಾ ಅವರ ವಾದವನ್ನು ಧನುಷ್ ಪರ ವಕೀಲರು ತಳ್ಳಿ ಹಾಕಿದ್ದಾರೆ. ನನ್ನ ಕಕ್ಷಿದಾರರು ಶೂಟಿಂಗ್ ಸ್ಥಳದಲ್ಲಿ ದೃಶ್ಯಗಳನ್ನು ಚಿತ್ರೀಕರಿಸಲು ಯಾರನ್ನೂ ನಿಯೋಜಿಸಿರಲಿಲ್ಲ ಎಂದಿದ್ದಾರೆ.
ಬಿಯಾಂಡ್ ದಿ ಫೇರಿ ಟೇಲ್’ ಹೆಸರಿನ ಸಾಕ್ಷ್ಯಚಿತ್ರವನ್ನು ನೆಟ್ಫ್ಲಿಕ್ಸ್ ಒಟಿಟಿ ವೇದಿಕೆ ಇಂದು ಬಿಡುಗಡೆ ಮಾಡಿದೆ. ಈ ಸಾಕ್ಷ್ಯಚಿತ್ರಕ್ಕಾಗಿ ಧನುಷ್ ನಿರ್ಮಿಸಿದ ನಾನೂಮ್ ರೌಡಿ ಥಾನ್ ಸಿನಿಮಾದ ಕೇವಲ ಮೂರು ಸೆಕೆಂಡುಗಳ ತುಣುಕನ್ನು ಬಳಸಲು ಧನುಷ್ ಅನುಮತಿ ನಿರಾಕರಿಸಿದ್ದರು.
ಎನ್ಒಸಿ ಕೊಡಲಿಲ್ಲ ಎಂದು ನಯನತಾರಾ ಆರೋಪಿಸಿದ್ದಾರೆ. ಟ್ರೈಲರ್ನಲ್ಲಿ ಚಿತ್ರದ ದೃಶ್ಯಗಳಿರುವುದನ್ನು ಕಂಡು 10 ಕೋಟಿ ರೂ. ಪರಿಹಾರಕ್ಕಾಗಿ ಧನುಷ್ ಲೀಗಲ್ ನೋಟಿಸ್ ಕಳುಹಿಸಿದ್ದರು. ಇದಕ್ಕೆ ಗರಂ ಆಗಿದ್ದ ನಟಿ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ಈ ವಿವಾದ ದೊಡ್ಡ ವಿವಾದಕ್ಕೆ ದಾರಿ ಮಾಡಿಕೊಡುತ್ತಿದೆ.