ಬೆಂಗಳೂರು : ರಾಜ್ಯದ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆಯನ್ನು ಸಂಪೂರ್ಣವಾಗಿ ತಡೆಯಲು ಕಾರಾಗೃಹ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಜೈಲುಗಳಲ್ಲಿ ಕೈದಿಗಳನ್ನು ಮಾದಕ ವಸ್ತು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾರ್ಚ್ 9ರಂದು ಸಿಬ್ಬಂದಿಯೊಬ್ಬರು ತಮ್ಮ ಒಳಉಡುಪಿನಲ್ಲಿ ಮಾದಕ ವಸ್ತುಗಳನ್ನು ಜೈಲಿನೊಳಗೆ ತಂದುಕೊಂಡು ಬಂದ ಘಟನೆ ಬೆಳಕಿಗೆ ಬಂದಿತ್ತು. ಇದಲ್ಲದೆ, ರಾಜ್ಯದ ವಿವಿಧ ಜೈಲುಗಳಲ್ಲಿ ಈ ರೀತಿಯ ಅಕ್ರಮಗಳು ಹಲವು ಬಾರಿ ಪತ್ತೆಯಾಗಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ.
ನಿಮ್ಹಾನ್ಸ್ ಆಸ್ಪತ್ರೆಯ ಸಹಯೋಗದೊಂದಿಗೆ “ಡ್ರಗ್ಸ್ ಮುಕ್ತ ಕಾರಾಗೃಹ” ನಿರ್ಮಾಣ ಮಾಡುವ ಗುರಿಯಿಂದ ಈ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಯೋಜನೆಯಡಿ ಕೈದಿಗಳಿಗೆ ಗಾಂಜಾ, ಹೆರೊಯಿನ್, ಕೊಕೈನ್ ಸೇರಿದಂತೆ ವಿವಿಧ ಮಾದಕ ವಸ್ತುಗಳ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.
ಮೊದಲ ಹಂತದಲ್ಲಿ ರಾಜ್ಯದ ಎಲ್ಲಾ ಜೈಲುಗಳಲ್ಲಿ ಸುಮಾರು ಶೇ 10ರಷ್ಟು ಕೈದಿಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಕಾರಾಗೃಹ ಇಲಾಖೆ ನೀಡಿರುವ ವಿಶೇಷ ಕಿಟ್‌ಗಳ ಮೂಲಕ ಜೈಲು ವೈದ್ಯಾಧಿಕಾರಿಗಳು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ಪರೀಕ್ಷೆಯಲ್ಲಿ ಕೈದಿಗಳು ಮಾದಕ ವಸ್ತು ಸೇವಿಸಿರುವುದು ಪತ್ತೆಯಾದರೆ ತಕ್ಷಣವೇ ಅವರಿಗೆ ಕೌನ್ಸೆಲಿಂಗ್ ನೀಡಲಾಗುತ್ತದೆ. ಹೆಚ್ಚು ಅಡಿಕ್ಟ್ ಆಗಿರುವ ಕೈದಿಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವ ವ್ಯವಸ್ಥೆಯೂ ಮಾಡಲಾಗಿದೆ.
ಆದರೆ ಪರೀಕ್ಷೆಯಲ್ಲಿ ಮಾದಕ ವಸ್ತು ಸೇವನೆ ಪತ್ತೆಯಾದ ಕೈದಿಗಳ ವಿರುದ್ಧ ಸದ್ಯಕ್ಕೆ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬದಲಿಗೆ ಕೌನ್ಸೆಲಿಂಗ್ ಹಾಗೂ ಚಿಕಿತ್ಸೆಯ ಮೂಲಕ ಕೈದಿಗಳನ್ನು ಸರಿಯಾದ ದಾರಿಗೆ ತರಲು ಕಾರಾಗೃಹ ಇಲಾಖೆ ಮುಂದಾಗಿದೆ.
ಇದನ್ನೂ ಓದಿ : ಭೂಮಿಗೆ ಬರಲು ಸಜ್ಜಾಗಿದ್ದಾನೆ ಭಯಾನಕ ರಾಕ್ಷಸ!


















