ದೇವಾಲಯದ ಜಾತ್ರಾ ಮಹೋತ್ಸವದ ವೇಳೆ ಪ್ರಸಾದ ಸೇವಿಸಿ 5೦ಕ್ಕೂ ಅಧಿಕ ಮಂದಿ ಅಸ್ವಸ್ಥರಾಗಿರುವ ಘಟನೆ ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮಾಲೆಕಲ್ ತಿರುಪತಿ ಗ್ರಾಮದಲ್ಲಿ ನಡೆದಿದೆ.
ಚಿಕ್ಕತಿರುಪತಿ ಎಂದೇ ಪ್ರಸಿದ್ದವಾಗಿರುವ ವೆಂಕಟೇಶ್ವರ ಸ್ವಾಮಿ ಜಾತ್ರೆ ಹಿನ್ನೆಲೆಯಲ್ಲಿ ಖಾಸಗಿ ಸಂಘ ಸಂಸ್ಥೆಯಿಂದ ಪ್ರಸಾದವನ್ನು ವಿತರಿಸಲಾಗಿದೆ. ಭಾನುವಾರ ರಾತ್ರಿ 7.30ಕ್ಕೆ ದೇಗುಲದ ಹೊರಗೆ ಮೊಸರನ್ನ ಹಾಗೂ ಬಿಸಿಬೇಳೆ ಬಾತ್ ನ್ನು ನೀಡಲಾಗಿತ್ತು. ಪ್ರಸಾದ ಸೇವಿಸಿದ ಹಲವರಿಗೆ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡಿದೆ.
ಕೂಡಲೆ ಅಸ್ವಸ್ಥರನ್ನು ಅರಸೀಕೆರೆ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ 30ಕ್ಕೂ ಅಧಿಕ ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಭಕ್ತರು ಸೇವಿಸಿದ್ದ ಪ್ರಸಾದದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.



















