ರಾಮನಗರ: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಅವರು ಯಾವೊಬ್ಬ ಒಕ್ಕಲಿಗರನ್ನು ಬೆಳೆಯಲು ಬಿಡಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಚನ್ನಪಟ್ಟಣದ ದೊಡ್ಡ ಮಳೂರಿನಲ್ಲಿ ಸೋಮವಾರ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವೈ.ಕೆ.ರಾಮಯ್ಯ, ನಾಗೇಗೌಡ, ಬಚ್ಚೇಗೌಡ, ವರದೇಗೌಡ, ಪಟ್ಟಣ್ಣ, ಚಲುವರಾಯಸ್ವಾಮಿ, ಬಾಲಕೃಷ್ಣ, ಭೈರೇಗೌಡ, ಕೆ.ಆರ್.ಪೇಟೆ ಚಂದ್ರಶೇಖರ್ ಸೇರಿದಂತೆ ಹೀಗೆ ಸಾಲು ಸಾಲು ನಾಯಕರನ್ನು ಇವರು ಮುಗಿಸಿದ್ದಾರೆ. ಇವರು ರಾಜ್ಯದಲ್ಲಿ ತಮ್ಮ ಕುಟುಂಬ ಮಾತ್ರ ಬೆಳೆಯುವಂತೆ ಮಾಡುತ್ತಿದ್ದಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುದ್ದವಂತ ಒಕ್ಕಲಿಗರು, ರಾಜಕೀಯ ಪ್ರಜ್ಞೆ ಇರುವ ಒಕ್ಕಲಿಗರು ಯಾರನ್ನೂ ದೇವೇಗೌಡರು ಬೆಳೆಯಲು ಬಿಡದೆ ಮುಗಿಸ್ತಾರೆ. ಈಗ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಅವರನ್ನೂ ಮುಗಿಸುವ ಪಯತ್ನ ಮಾಡುತ್ತಿದ್ದಾರೆ. ಆದರೆ, ಇದು ಅವರ ಕೈಯಿಂದ ಆಗಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಲೋಕಸಭೆಯಲ್ಲಿ, ರಾಮನಗರ ವಿಧಾನಸಭೆಯಲ್ಲಿ ನಿಖಿಲ್ ಸೋತಿದ್ದಾರೆ. ಈಗ ಚನ್ನಪಟ್ಟಣಕ್ಕೆ ಕರೆತಂದು ನಿಲ್ಲಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರ ಅಳಿಯ ಡಾ.ಮಂಜುನಾಥ್ ಗೆಲುವಿಗೆ ಯೋಗೇಶ್ವರ್ ಬಹಳ ಶ್ರಮಿಸಿದರು. ಆಗ ಯೋಗೇಶ್ವರ್ ಅವರನ್ನು ಬೆಂಬಲಿಸುವ ಮಾತುಗಳನ್ನು ಆಡಿದ್ದರು. ಆದರೆ, ಚುನಾವಣೆ ಬಂದಾಗ ಕೈ ಕೊಟ್ಟರು ಎಂದು ಆರೋಪಿಸಿದ್ದಾರೆ.