ರಾಯಚೂರು : ದೇವದುರ್ಗ ಜೆಡಿಎಸ್ ಶಾಸಕಿ ಜಿ. ಕರೆಮ್ಮಾ ನಾಯಕ್ ತೆರಳುತ್ತಿದ್ದ ಕಾರು ಅಪಘಾತವಾಗಿದ್ದು, ಶಾಸಕಿಗೆ ಸಣ್ಣಪುಟ್ಟ ಗಾಯಗಳಾಗಿದೆ.ಈ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಕ್ರಾಸ್ ಹತ್ತಿರ ಇಂದು ಬೆಳಗಿನ ಜಾವ ಸಂಭವಿಸಿದೆ. ಬಳಿಕ ಲಿಂಗಸುಗೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆ ಕರೆದೊಯ್ಯಲಾಗಿದೆ.

ಶಾಸಕರು ತೆರಳುತ್ತಿದ್ದ ವೇಳೆ ಕಾರಿನ ಮುಂಬದಿ ಇದ್ದ ಮತ್ತೊಂದು ಕಾರಿಗೆ ನಾಯಿ ಅಡ್ಡ ಬಂದಿದೆ. ನಾಯಿ ತಪ್ಪಿಸಲು ಕಾರಿನ ಚಾಲಕ ಯತ್ನಿಸಿದ್ದು, ರಸ್ತೆ ಪಕ್ಕದ ಗುಡ್ಡಕ್ಕೆ ಕಾರು ಡಿಕ್ಕಿಯಾಗಿದೆ. ಹಿಂದೆಯೇ ಶಾಸಕರಿದ್ದ ಕಾರು ಕೂಡ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ. ಘಟನೆಯಲ್ಲಿ ಜಖಂಗೊಂಡಿರುವ ಎರಡು ಕಾರುಗಳು ಕೂಡ ಕರೆಮ್ಮಾ ನಾಯಕ್ ಅವರಿಗೆ ಸೇರಿದ್ದು ಎನ್ನಲಾಗಿದ್ದು, ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್ ಶಾಸಕಿ ಕರೆಮ್ಮಾ ನಾಯಕ್ ಪ್ರಾಣಾಪಾಯ ಪಾರಾಗಿದ್ದು, ಸಣ್ಣಪುಟ್ಟ ಗಾಯಗಳಾಗಿವೆ.
ಘಟನಾ ಸ್ಥಳಕ್ಕೆ ಲಿಂಗಸುಗೂರು ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಸ್ಥಳೀಯ ತಹಶೀಲ್ದಾರ್ ಆಗಮಿಸಿ, ತನಿಖೆ ಪ್ರಾರಂಭಿಸಿದ್ದಾರೆ. ಚಾಲಕನ ವೇಗ ಮಿತಿ ಮೀರಿದ್ದು ಮುಖ್ಯ ಕಾರಣವಾಗಿದೆ. ಈ ರಸ್ತೆಯು ರಾಯಚೂರು-ಹೊರ್ಕಲ್ ಮಾರ್ಗವಾಗಿದ್ದು, ಇಲ್ಲಿ ಆಗಾಗ ಅಪಘಾತಗಳು ನಡೆಯುತ್ತಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಸದ್ಯ ಶಾಸಕಿ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.