ದಾವಣಗೆರೆ | ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಟಿಕೆಟ್ ವಿಚಾರ ಬಿಜೆಪಿ ಒಳಗೆ ಹೊಸ ಚರ್ಚೆಗೆ ಕಾರಣವಾಗಿದೆ. ಟಿಕೆಟ್ ಘೋಷಣೆ ಆಗುತ್ತಿದ್ದಂತೆಯೇ ರಾಜ್ಯ ನಾಯಕರಲ್ಲಿ ಹೊರಗೆ ಶಾಂತಿ ಕಂಡರೂ ಒಳಗೊಳಗೆ ಅಸಮಾಧಾನ ಕುದಿಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶ್ರೀನಿವಾಸ್ ಟಿ ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿರುವುದೇ ಈ ಅಸಮಾಧಾನದ ಕೇಂದ್ರಬಿಂದುವಾಗಿದೆ. ಅವರು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರ ಶಿಷ್ಯರಾಗಿರುವುದರಿಂದ ಒಂದು ಬಣ ಇದನ್ನು “ಒಳಗಿನ ಲಾಬಿ ರಾಜಕೀಯ” ಎಂದು ಆರೋಪಿಸುತ್ತಿದೆ.
ಇದರಿಂದ ರೇಣುಕಾಚಾರ್ಯ ಬಣ ತೀವ್ರ ಅಸಮಾಧಾನದಲ್ಲಿದ್ದು, “ರೆಬೆಲ್ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿದೆ” ಎಂಬ ಭಾವನೆ ಅವರಲ್ಲಿ ಮೂಡಿದೆ. ಈ ಒಳಗೊಳಗಿನ ಬೇಗುದಿ ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಜೋರಾಗಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರದ ಜಾತಿ ಸಮೀಕರಣವೂ ಈ ವಿಚಾರಕ್ಕೆ ಮತ್ತಷ್ಟು ಬಣ್ಣ ಹಚ್ಚಿದೆ. ಇಲ್ಲಿ ಎಸ್‌ಟಿ ಸಮುದಾಯದ ಮತಗಳು ಸುಮಾರು 13 ಸಾವಿರ ಇದ್ದರೆ, ಲಿಂಗಾಯತ ಸಮುದಾಯದ ಮತಗಳು 35ರಿಂದ 40 ಸಾವಿರವರೆಗೆ ಇರುವುದರಿಂದ ಟಿಕೆಟ್ ಆಯ್ಕೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಹಿಂದಿನ ಬಾರಿ ಸೋತ ಅಭ್ಯರ್ಥಿ ಅಜಯ್ ಕುಮಾರ್ ಅವರಿಗೆ ಟಿಕೆಟ್ ಕೊಡಬೇಕಾಗಿತ್ತು ಎಂದು ರೇಣುಕಾಚಾರ್ಯ ಬಣ ಅಭಿಪ್ರಾಯ ವ್ಯಕ್ತಪಡಿಸಿದೆ. ಲಿಂಗಾಯತ ಸಮುದಾಯದವರಾಗಿರುವ ಅಜಯ್ ಕುಮಾರ್ ಪರವಾಗಿ ಅವರು ಬಲವಾಗಿ ನಿಂತಿದ್ದರು.
ಈ ಒಳಜಗಳ ಮತ್ತು ಅಸಮಾಧಾನ ದಾವಣಗೆರೆ ದಕ್ಷಿಣದಲ್ಲಿ ಬಿಜೆಪಿ ಗೆಲುವಿಗೆ ಅಡ್ಡಿಯಾಗುತ್ತದೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ. “ಒಳಗಿನ ಕಿಚ್ಚೇ ಸೋಲಿಗೆ ಕಾರಣವಾಗುತ್ತದೆಯೇ?” ಎಂಬ ಆತಂಕ ಪಕ್ಷದ ಒಳಗೂ ಹೊರಗೂ ಕೇಳಿಬರುತ್ತಿದೆ.
ಇದನ್ನೂ ಓದಿ : CSK ತಂಡದ ಹೊಸ ಸ್ಟಾರ್ ಆಟಗಾರ ಸಂಜು ಸ್ಯಾಮ್ಸನ್ ಚೆನ್ನೈಗೆ ಆಗಮನ.. ಅದ್ಧೂರಿ ಸ್ವಾಗತ!



















