ಟ್ರಂಪ್ ವಲಸಿಗರಿಗೆ ವೀಸಾ ಕಡಿವಾಣ ಹಾಕಿದ ಬಳಿಕ ಅಮೆರಿಕದಲ್ಲಿ ಕೌಶಲ್ಯವಂತ ಕಾರ್ಮಿಕರ ಕೊರತೆ ಸಿಕ್ಕಾಪಟ್ಟೆ ಆಗಿದೆ. ವಾಹನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಕಂಪನಿಗಳು ನುರಿತ ಕೆಲಸಗಾರರನ್ನು ನೇಮಿಸಿಕೊಳ್ಳಲು ಹೆಣಗಾಡುತ್ತಿವೆ. ಅದರಲ್ಲೂ ಮೆಕ್ಯಾನಿಕ್ಸ್, ಪ್ಲಂಬಿಂಗ್, ಎಲೆಕ್ಟ್ರಿಶಿಯನ್ ಮೊದಲಾದ ಕೌಶಲ್ಯವಂತ ಕಾರ್ಮಿಕರ ಕೊರತೆ ಸೃಷ್ಟಿಯಾಗಿದೆ. ಕಂಪನಿಗಳು ಭಾರೀ ಮೊತ್ತದ ಸಂಬಳ ಆಫರ್ ಮಾಡುತ್ತಿದ್ರೂ ಕೆಲಸಗಾರರು ಬರ್ತಾ ಇಲ್ಲ.
ಕಂಪನಿಗಳು ಹೈ-ಸ್ಕಿಲ್ ಹಾಗೂ ಮಿಡ್-ಸ್ಕಿಲ್ ವರ್ಕರ್‌ಗಳನ್ನು ಹುಡುಕುತ್ತಿವೆ. ಅಂತೆಯೇ ಫೋರ್ಟ್ ಮೋಟಾರ್ ಕಂಪನಿಯ ಸಿಇಒ ಜಿಮ್ ಫಾರ್ಲೀ ಇತ್ತೀಚೆಗೆ ಇಂಥ ಒಂದು ಸಂದಿಗ್ಧ ಸ್ಥಿತಿ ಏರ್ಪಟ್ಟಿರುವ ಬಗ್ಗೆ ಹೇಳಿಕೊಂಡಿದ್ದಾರೆ. 5,000 ಮೆಕ್ಯಾನಿಕ್ ಹುದ್ದೆಗಳನ್ನು ಭರ್ತಿ ಮಾಡಲು ಕಂಪನಿಗೆ ಸಾಧ್ಯವಾಗುತ್ತಿಲ್ಲ. ವರ್ಷಕ್ಕೆ ಒಂದು ಕೋಟಿ ರೂವರೆಗೆ ಸಂಬಳ ಆಫರ್ ಮಾಡುತ್ತಿದ್ದರೂ ನೇಮಕಾತಿ ಆಗುತ್ತಿಲ್ಲ ಎಂದು ಅವರು ಹತಾಶೆ ವ್ಯಕ್ತಪಡಿಸಿದ್ದಾರೆ.
ಫೋರ್ಡ್ ಸೂಪರ್ ಡ್ಯೂಟಿ ಟ್ರಕ್ನಿಂದ ಡೀಸಲ್ ಎಂಜಿನ್ ಅನ್ನು ಹೊರತೆಗೆಯುವುದು ಅಷ್ಟು ಸುಲಭವಲ್ಲ. ಅದರ ಪರಿಣಿತಿ ಸಾಧಿಸಲು ಐದು ವರ್ಷ ಬೇಕಾಗುತ್ತದೆ. ಅಮೆರಿಕನ್ ಯುವಕರಿಗೆ ಈ ತಾಂತ್ರಿಕ ಕೌಶಲ್ಯ ಗೊತ್ತಿಲ್ಲ. ತಮ್ಮ ಅಜ್ಜಂದಿರ ಕಾಲದಲ್ಲಿ ಸಿಗುತ್ತಿದ್ದ ರೀತಿಯ ಶಿಕ್ಷಣ ಇವತ್ತಿನ ಕಾಲದಲ್ಲಿ ಸಿಗುತ್ತಿಲ್ಲ ಹಾಗಾಗಿ ವಿದೇಶಿ ಕಾರ್ಮಿಕರು ಬೇಕಾಗುತ್ತದೆ ಎಂದೆನ್ನುತ್ತಾರೆ ಸಿಇಒ ಜಿಮ್ ಫಾರ್ಲೀ.
ವಲಸೆ ಕಾರ್ಮಿಕರ ಉದ್ಯೋಗ ಅಧಿಕಾರ ದಾಖಲೆಗಳ ಸ್ವಯಂಚಾಲಿತ ವಿಸ್ತರಣೆಯನ್ನು ನಿಲ್ಲಿಸಲು, ಅಮೆರಿಕದ ಗೃಹ ಭದ್ರತಾ ಇಲಾಖೆ ಮಧ್ಯಂತರ ನಿಯಮವನ್ನ ಘೋಷಿಸಿತ್ತು. EADಯನ್ನುನವೀಕರಿಸಲು ಅರ್ಜಿ ಸಲ್ಲಿಸುವ ವಿದೇಶಿಯರು, ಇನ್ನು ಮುಂದೆ ತಮ್ಮ EADಯ ಸ್ವಯಂಚಾಲಿತ ವಿಸ್ತರಣೆಯನ್ನು ಪಡೆಯುವುದಿಲ್ಲ” ಎಂದು ಹೇಳಿತ್ತು. ಇಷ್ಟೇ ಅಲ್ಲದೇ “ಉದ್ಯೋಗ ಅಧಿಕಾರ ದಾಖಲೆಗಳಲ್ಲಿ ಸಾರ್ವಜನಿಕ ಸುರಕ್ಷತೆ, ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸಲು ಹೆಚ್ಚಿನ ಪರಿಶೀಲನೆ ಮತ್ತು ಕಠಿಣ ಸ್ಕ್ರೀನಿಂಗ್” ಇರುತ್ತದೆ ಎಂದೂ ಕೂಡ ಹೇಳಿದ್ದರು. ಈ ವಿಷಯ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಚರ್ಚೆಗೀಡಾಗಿತ್ತು.ಆವಾಗಲೇ ಇದು ಅಮೆರಿಕ ಮಾರುಕಟ್ಟೆ ಮೇಲೆ ಬಲವಾದ ಹೊಡೆತ ಬೀಳುತ್ತದೆ ಎಂದು ಗಾಳಿಸುದ್ದಿ ಹರಿದಾಡಿತ್ತಿತ್ತು. ಅಂತೆಯೇ ಇದೀಗ ದೊಡ್ಡಣ್ಣ, ಉದ್ಯೋಗಿಗಳಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ.
ಫೋರ್ಡ್ನಂತಹ ಕಂಪನಿಗಳಲ್ಲಿ ಈಗ ಕಾರ್ಮಿಕರ ಕೊರತೆ ಆತಂಕಪಡುವಷ್ಟು ಎದುರಾಗಿದೆ. ನಿಪುಣ ಮೆಕ್ಯಾನಿಕ್ಗಳಿಲ್ಲದೆ ಅನೇಕ ಕಾರುಗಳು ಅಸೆಂಬ್ಲಿ ಲೈನ್ನಿಂದ ಹೊರಬರದೇ ಉಳಿದುಕೊಂಡಿವೆ. ಕೆಲ ನಗರಗಳಲ್ಲಿ ಕಂಪನಿಗಳು ಎಲೆಕ್ಟ್ರಿಶಿಯನ್, ಪ್ಲಂಬರ್ಗಳಿಗೆ ವರ್ಷಕ್ಕೆ 1,20,000 ಡಾಲರ್ವರೆಗೂ ಸಂಬಳ ಆಫರ್ ಮಾಡಲಾಗುತ್ತಿದೆಯಂತೆ. 1.20 ಲಕ್ಷ ಡಾಲರ್ ಎಂದರೆ ಬಹುತೇಕ ಒಂದು ಕೋಟಿ ರೂ. ಆದರೂ ಉದ್ಯೋಗಿಗಳು ಮಾತ್ರ ಅಮೆರಿಕಾದ ಕಡೆ ಮುಖ ಮಾಡುತ್ತಿಲ್ಲ.
ವಿಶ್ವದ ದೊಡ್ಡ ಆರ್ಥಿಕತೆಯ ಮೂಲವೇ., ಮಾನವ ಸಂಪನ್ಮೂಲ ಅಭಾವದಿಂದ ಬಳಲುತ್ತಿದೆ. ಟ್ರಂಪ್ ಆಡಳಿತದ ಈ ವಲಸೆ ನಿಯಂತ್ರಣಗಳು ವಿದೇಶಿ ಕಾರ್ಮಿಕರನ್ನು ತಡೆದು, ದೊಡ್ಡಣ್ಣ ಉದ್ಯೋಗ ಮಾರುಕಟ್ಟೆಯಲ್ಲೇ ದೊಡ್ಡ ಶೂನ್ಯವನ್ನು ಸೃಷ್ಟಿಸಿಕೊಂಡಿದೆ. ವಲಸೆ ಕಡಿತದಿಂದ ಅಮೆರಿಕಾ ಬಲವಾಗುವುದಕ್ಕಿಂತ ದುರ್ಬಲಗೊಳ್ಳುವುದೇ ಹೆಚ್ಚಾಗಿದೆ. ಇದರಿಂದಾದ್ರೂ ಅಮೆರಿಕಾ ಎಚ್ಚೆತ್ತು ಕೊಳ್ಳುತ್ತಾ ಅಥವಾ ಅದೇ ನೀತಿಗೆ ಗಂಟು ಬಿದ್ದು ಹಠ ಸಾಧಿಸುತ್ತಾ ಕಾದು ನೋಡಬೇಕಾಗಿದೆ.
ಇದನ್ನೂ ಓದಿ : ನಿಕಾನ್ ಇಂಡಿಯಾದಿಂದ 1 ಲಕ್ಷ ರೂಪಾಯಿ ಸ್ಕಾಲರ್ ಶಿಪ್ : ಹೀಗೆ ಅರ್ಜಿ ಸಲ್ಲಿಸಿ



















