ರಾಜ್ಯ ರಾಜಕಾರಣದಲ್ಲಿ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಮುಡಾ ಹಗರಣ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಪ್ರಾಸಿಕ್ಯೂಷನ್ ಗೆ ಅನುಮತಿನೀಡಿದ್ದರಿಂದಾಗಿ ಈ ಸಂಘರ್ಷ ಶುರುವಾಗುವಂತಾಗಿದೆ. ಈ ಮಧ್ಯೆ ರಾಜ್ಯಪಾಲರು ಹಾಗೂ ಡಿಸಿಎಂ ಒಂದೆ ಕಡೆ ಕುಳಿತು ಊಟ ಸವಿದಿದ್ದು, ಅಚ್ಚರಿಗೆ ಕಾರಣವಾಗಿದೆ.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಿದ್ದಂತೆ ರಾಜ್ಯಪಾಲರ ವಿರುದ್ಧ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು, ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇಂದು ರಾಜ್ಯಪಾಲ ಥಾವರ್ ಚೆಂದ ಗೆಹ್ಲೋಟ್ ಜೊತೆ ಡಿಸಿಎಂ ಊಟ ಸವಿದಿದ್ದಾರೆ.
ಸಚಿವ ಬೈರತಿ ಸುರೇಶ್ ಅವರ ಪುತ್ರ ಸಂಜಯ್ ಹಾಗೂ ಶಾಸಕ ಎಸ್ ಆರ್ ವಿಶ್ವನಾಥ್ ಅವರ ಪುತ್ರಿ ಅಪೂರ್ವ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಡಿಸಿಎಂ ಭಾಗವಹಿಸಿದ್ದರು. ರಾಜ್ಯಪಾಲರು ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಈ ವೇಳೆ ಇಬ್ಬರೂ ಮುಖಾಮುಖಿಯಾದರು. ಹೀಗಾಗಿ ಇಬ್ಬರೂ ಸೇರಿ ಊಟ ಸವಿದಿದ್ದಾರೆ. ಇದಕ್ಕೂ ಮುನ್ನ ಇಬ್ಬರೂ ಕುಶಲೋಪರಿ ವಿಚಾರಿಸಿದ್ದಾರೆ.
ಪ್ರಾಸಿಕ್ಯೂಷನ್ ವಿಚಾರವಾಗಿ ರಾಜ್ಯಪಾಲರ ವಿರುದ್ಧ ಡಿಕೆ ಶಿವಕುಮಾರ್ ಸಿಡಿದು ಕೆಂಡವಾಗಿದ್ದಾರೆ. ಅಲ್ಲದೇ, ಸರ್ಕಾರದ 11 ಬಿಲ್ ಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ. ಇಡೀ ಸರ್ಕಾರವೇ ರಾಜ್ಯಪಾಲರ ನಡೆಗೆ ತೀವ್ರವಾಗಿ ವಿರೋಧಿಸುತ್ತಿದೆ. ಹೀಗಾಗಿ ಆಗಸ್ಟ್ 31ರಂದು ರಾಜಭವನ ಚಲೋಗೆ ಡಿಕೆ ಶಿವಕುಮಾರ್ ಕರೆ ನೀಡಿದ್ದಾರೆ.
ಆದರೆ, ಕಾರ್ಯಕ್ರಮದಲ್ಲಿ ಇಬ್ಬರು ಆತ್ಮೀಯವಾಗಿ ನಗು ನಗುತ್ತಲೇ ಮಾತನಾಡುತ್ತ ಭೋಜನ ಸವಿದರು. ಹೀಗಾಗಿ ವಿರೋಧದ ಮಧ್ಯೆಯೂ ಕುಳಿತು ಊಟ ಮಾಡಿದ್ದಕ್ಕೆ ಜನರು ಆಶ್ಚರ್ಯ ಹಾಗೂ ಅಚ್ಚರಿ ವ್ಯಕ್ತಪಡಿಸಿದ್ದಾರೆ.