ಬೆಂಗಳೂರು: ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಗಳು ಯಾವಾಗ ಬೇಕಾದರೂ ಏರಿಕೆ ಕಾಣಬಹುದು ಇಲ್ಲವೇ ಕುಸಿಯಬಹುದಾಗಿದೆ. ಹಾಗಾಗಿ, ಹೆಚ್ಚಿನ ಜನ ಪೋಸ್ಟ್ ಆಫೀಸಿನ ಹೂಡಿಕೆ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಕೇಂದ್ರ ಸರ್ಕಾರದ ಬೆಂಬಲ ಇರುವ ಕಾರಣ ಈ ಯೋಜನೆಗಳು ಸುರಕ್ಷಿತ ಎನಿಸಿವೆ. ಅದರಲ್ಲೂ, ಪೋಸ್ಟ್ ಆಫೀಸಿನ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಹೆಚ್ಚು ಜನಪ್ರಿಯವಾಗಿದೆ. ಹೌದು, ಪೋಸ್ಟ್ ಆಫೀಸಿನ ಪಿಪಿಎಫ್ ಯೋಜನೆ ಅಡಿಯಲ್ಲಿ ತಿಂಗಳಿಗೆ 12,500 ರೂ. ಹೂಡಿಕೆ ಮಾಡಿದರೆ, 15 ವರ್ಷಗಳಲ್ಲಿಯೇ 40 ಲಕ್ಷ ರೂಪಾಯಿ ಗಳಿಕೆ ಮಾಡಬಹುದಾಗಿದೆ.
ಪಿಪಿಎಫ್ ಯೋಜನೆಯಲ್ಲಿ ನೀವು 15 ವರ್ಷಗಳವರೆಗೆ ಮಾಸಿಕ 12,500 ರೂ. ಹೂಡಿಕೆ ಮಾಡಬೇಕು. ಇದಕ್ಕೆ ಶೇ.7.1ರಷ್ಟು ಬಡ್ಡಿ ನೀಡಲಾಗುತ್ತದೆ. 15 ವರ್ಷಗಳಲ್ಲಿ ನೀವು 22.5 ಲಕ್ಷ ರೂಪಾಯಿ ಹೂಡಿಕೆ ಮಾಡಿದಂತೆ ಆಗುತ್ತದೆ. ಇದಕ್ಕೆ ಶೇ.7.1ರಷ್ಟು ಬಡ್ಡಿ ಅಂದರೆ, 18.18 ಲಕ್ಷ ರೂಪಾಯಿ ಬಡ್ಡಿ ಆದಾಯವೇ ಲಭಿಸುತ್ತದೆ. ಆಗ ನಿಮಗೆ ಮೆಚ್ಯೂರಿಟಿ ಮೊತ್ತವವಾಗಿ 40.68 ಲಕ್ಷ ರೂಪಾಯಿ ಸಿಗುತ್ತದೆ.
ಅಲ್ಲದೆ, ಪಿಪಿಎಫ್ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ತೆರಿಗೆ ಉಳಿತಾಯದ ಲಾಭವನ್ನೂ ಪಡೆಯಬಹುದಾಗಿದೆ. ನೀವು ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇದು ಮ್ಯೂಚುವಲ್ ಫಂಡ್ ಹಾಗೂ ಷೇರು ಮಾರುಕಟ್ಟೆಯ ರೀತಿ ರಿಸ್ಕ್ ಹೊಂದಿರುವ ಹೂಡಿಕೆಯಲ್ಲ. ನಿಮಗೆ 15 ವರ್ಷಗಳಲ್ಲಿ ಖಾತರಿ ಮೊತ್ತವನ್ನು ನೀಡುತ್ತದೆ.
ಪಿಪಿಎಫ್ ಯೋಜನೆಯಲ್ಲಿ ತಿಂಗಳಿಗೆ 12,500 ರೂಪಾಯಿ ಮಾತ್ರವೇ ಹೂಡಿಕೆ ಮಾಡಬೇಕು ಎಂಬ ನಿಯಮವಿಲ್ಲ. ವರ್ಷದಲ್ಲಿ ನೀವು 1.5 ಲಕ್ಷ ರೂಪಾಯಿವರೆಗೆ ಗರಿಷ್ಠ ಹೂಡಿಕೆ ಮಾಡಬಹುದಾಗಿದೆ. 15 ವರ್ಷಗಳ ಬಳಿಕ ನೀವು ಇನ್ನೂ 5 ವರ್ಷಗಳವರೆಗೆ ಹೂಡಿಕೆ ಯೋಜನೆಯನ್ನು ವಿಸ್ತರಣೆ ಮಾಡಬಹುದು. ಇದರಿಂದ ನಿಮಗೆ ಹೆಚ್ಚಿನ ಬಡ್ಡಿ ಆದಾಯ ಲಭಿಸುತ್ತದೆ.
ಗಮನಿಸಿ: ಅಂಚೆ ಕಚೇರಿಯ ಪಿಪಿಎಫ್ ಹೂಡಿಕೆ ಬಗ್ಗೆ ಮಾಹಿತಿ ನೀಡುವ ದೃಷ್ಟಿಯಿಂದ ಮಾತ್ರ ಲೇಖನವನ್ನು ಪ್ರಕಟಿಸಲಾಗಿದೆ. ನೀವು ಹೂಡಿಕೆ ಮಾಡಲು ಇದು ಶಿಫಾರಸು ಅಲ್ಲ. ಯಾವುದೇ ರೀತಿಯ ಹೂಡಿಕೆಗೂ ಮುನ್ನ ತಜ್ಞರ ಸಲಹೆ-ಸೂಚನೆ ಪಡೆಯಿರಿ.
ಇದನ್ನೂ ಓದಿ : ಹುಟ್ಟೂರು ರಾಮದುರ್ಗದಲ್ಲಿ ಇಂದು IAS ಅಧಿಕಾರಿ ಮಹಾಂತೇಶ್ ಬೀಳಗಿ ಅಂತ್ಯಕ್ರಿಯೆ | ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ



















