ವಾಷಿಂಗ್ಟನ್: ಅಕ್ರಮ ವಲಸಿಗರ ವಿರುದ್ಧದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸಮರ ತೀವ್ರಗೊಂಡಿದೆ. ಅಮೆರಿಕದಲ್ಲಿ ಬಂದು ನೆಲೆಸಿದ್ದ ಅಕ್ರಮ ವಲಸಿಗರನ್ನು ಅವರವರ ದೇಶಗಳಿಗೆ ವಾಪಸ್ ಕಳುಹಿಸುವ ಪ್ರಕ್ರಿಯೆಗೆ ಹೊಸ ಸೇರ್ಪಡೆಯೆಂಬಂತೆ, ಈಗ ಭಾರತೀಯ ವಲಸಿಗರನ್ನೂ ಟ್ರಂಪ್ ಗಡೀಪಾರು ಮಾಡಲಾರಂಭಿಸಿದ್ದಾರೆ.
ಇಂದು 205 ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಸೇನಾ ವಿಮಾನ ಅಮೃತಸರವನ್ನು ತಲುಪಲಿದೆ. ವರದಿ ಪ್ರಕಾರ ಅಮೆರಿಕದಲ್ಲಿ ಅಕ್ರಮವಾಗಿ ವಾಸವಿರುವ 205 ವಲಸಿಗರನ್ನು ಭಾರತಕ್ಕೆ ಟ್ರಂಪ್ ಗಡೀಪಾರು ಮಾಡಿದ್ದು, ಅವರನ್ನು ಹೊತ್ತ ವಿಮಾನ ಟೆಕ್ಸಾಸ್ ನಿಂದ ಈಗಾಗಲೇ ಟೇಕಾಫ್ ಆಗಿದೆ.
ಗಡೀಪಾರಾಗುತ್ತಿರುವ ಪ್ರತಿಯೊಬ್ಬ ಭಾರತೀಯನ ದಾಖಲೆಗಳನ್ನೂ ಪರಿಶೀಲಿಸಲಾಗಿದ್ದು, ದೃಢಪಟ್ಟ ಬಳಿಕವೇ ಪ್ರಕ್ರಿಯೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ, ಭಾರತ ಸರ್ಕಾರದ ಜೊತೆ ಮಾತುಕತೆ ನಡೆಸಿಯೇ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂಬ ಅನುಮಾನವಿದೆ. ಇಂದು ಬರುತ್ತಿರುವ ವಿಮಾನವು ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಮೊದಲ ವಿಮಾನವಾಗಿರಲಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಹಲವು ಬಾರಿ ಇಂಥ ಗಡೀಪಾರು ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ. ಏಕೆಂದರೆ, ವರದಿಯ ಪ್ರಕಾರ ಸುಮಾರು ಭಾರತದ ಸುಮಾರು 7.25 ಲಕ್ಷ ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ.
ಮತ್ತೊಂದು ಆಘಾತಕಾರಿ ವಿಚಾರವೆಂದರೆ, ಭಾರತೀಯರನ್ನು ಹೊತ್ತು ಬರುತ್ತಿರುವ ಅಮೆರಿಕದ ಸಿ-17 ವಿಮಾನದಲ್ಲಿ 205 ಮಂದಿಗೆ ಇರುವುದು ಒಂದೇ ಒಂದು ಶೌಚಾಲಯ! ಈ ವಿಮಾನ 24 ಗಂಟೆಗಳಲ್ಲಿ ಆಗಮಿಸುವ ನಿರೀಕ್ಷೆಯಿದೆ ಇದೆ ಎಂದು ಮೂಲಗಳು ತಿಳಿಸಿವೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಂದಿನ ವಾರ ಅಮೆರಿಕ ಪ್ರವಾಸ ಕೈಗೊಳ್ಳಲಿರುವಂತೆಯೇ ಈ ಬೆಳವಣಿಗೆ ನಡೆದಿದೆ.
ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಏರಿದೊಡನೆ ಟ್ರಂಪ್ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅವುಗಳ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು. ಈಗ ಅದು ಜಾರಿಯಾಗುತ್ತಿದ್ದು, ಈಗಾಗಲೇ ಬ್ರೆಜಿಲ್, ಪೆರು, ಗ್ವಾಟೆಮಾಲಾ, ಹೊಂಡುರಾಸ್‌ನ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಅವರೊಂದಿಗೆ ಮಾತನಾಡಿದ್ದ ಟ್ರಂಪ್ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಮೋದಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದರು. ಅಲ್ಲದೆ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೂ ಅಮೆರಿಕದಲ್ಲಿ ನೆಲೆಸಿರುವ ದಾಖಲೆರಹಿತ ಭಾರತೀಯರನ್ನು ಭಾರತ ವಾಪಸ್ ಕರೆಸಿಕೊಳ್ಳಲಿದೆ ಎಂದು ಹೇಳಿದ್ದರು.