ರಿಯೋ ಡಿ ಜನೈರೋ:
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಅಮೆರಿಕದ ನೂತನ ಸರ್ಕಾರವು ಅಕ್ರಮ ವಲಸಿಗರ ವಿರುದ್ಧ ಇತಿಹಾಸದಲ್ಲೇ ಅತಿದೊಡ್ಡ ಕಾರ್ಯಾಚರಣೆ ಆರಂಭಿಸಿದ್ದು, ಅದರ ಬಿಸಿ ಈಗ ಎಲ್ಲ ದೇಶಗಳಿಗೂ ತಟ್ಟಲಾರಂಭಿಸಿದೆ. ಇತ್ತೀಚೆಗಷ್ಟೇ ಟ್ರಂಪ್ ಆಡಳಿತವು 500ಕ್ಕೂ ಅಧಿಕ ಅಕ್ರಮ ವಲಸಿಗರನ್ನು ಬಂಧಿಸಿ, ನೂರಾರು ಮಂದಿಯನ್ನು ಗಡಿಪಾರು ಮಾಡುತ್ತಿರುವುದಾಗಿ ಘೋಷಿಸಿತ್ತು. ಅದರಂತೆ, ಭಾನುವಾರ ಬ್ರೆಜಿಲ್ ನ 88 ಮಂದಿ ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ವಿಮಾನವು ಬ್ರೆಜಿಲ್‌ಗೆ ಬಂದಿಳಿದಿದೆ. ಆದರೆ, ಅದರಲ್ಲಿದ್ದ 88 ಮಂದಿ ಬ್ರೆಜಿಲ್ ನಾಗರಿಕರಿಗೆ ಕೈಕೋಳ ತೊಡಿಸಿ ಕಳುಹಿಸಿದ್ದನ್ನು ನೋಡಿ ಬ್ರೆಜಿಲ್ ಕೆಂಡಾಮಂಡಲವಾಗಿದೆ.
ನಾಗರಿಕರಿಗೆ ಕೈಕೋಳ ತೊಡಿಸಲಾಗಿತ್ತು. ಗಡೀಪಾರು ಮಾಡಲಾದ ವಿಮಾನದಲ್ಲಿ ಎ.ಸಿ. ಇರಲಿಲ್ಲ, ವಲಸಿಗರಿಗೆ ಕುಡಿಯಲು ಹನಿ ನೀರೂ ಕೊಟ್ಟಿರಲಿಲ್ಲ. ವಲಸಿಗರನ್ನು ಅತ್ಯಂತ ಕೆಟ್ಟದಾಗಿ ನಡೆಸಿಕೊಳ್ಳುವ ಮೂಲಕ ಅಮೆರಿಕದ ಟ್ರಂಪ್ ಸರ್ಕಾರವು ಮಾನವ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಬ್ರೆಜಿಲ್ ವಿದೇಶಾಂಗ ಸಚಿವಾಲಯ ಆರೋಪ ಮಾಡಿದೆ.
ಅಕ್ರಮ ವಲಸಿಗರನ್ನು ಗಡೀಪಾರು ಮಾಡುವಲ್ಲಿ ಅಮೆರಿಕವು ಸೂಕ್ತ ನಿಯಮ ಪಾಲಿಸಿಲ್ಲ. ಇದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಬ್ರೆಜಿಲ್‌ನ ಮನೌಸ್‌ಗೆ ಬಂದ ವಿಮಾನದಲ್ಲಿ 88 ಮಂದಿ ಬ್ರೆಜಿಲ್ ಪ್ರಜೆಗಳಿದ್ದರು. ಇವರೆಲ್ಲರಿಗೂ ಕೈಕೋಳ ತೊಡಿಸಲಾಗಿತ್ತು. ಕೂಡಲೇ ಕೈಕೋಳ ತೆಗೆಯುವಂತೆ ಬ್ರೆಜಿಲ್‌ನ ಅಧಿಕಾರಿಗಳು ಸೂಚಿಸಿದರು. ಈ ಬಗ್ಗೆ ಅಮೆರಿಕ ಸರ್ಕಾರದಿಂದ ವಿವರಣೆ ಕೇಳಲಾಗುವುದು ಎಂದು ಬ್ರೆಜಿಲ್ ಹೇಳಿದೆ.

ಏತನ್ಮಧ್ಯೆ, ಕೊಲಂಬಿಯಾ ಮತ್ತು ಅಮೆರಿಕದ ನಡುವೆಯೂ ಅಕ್ರಮ ವಲಸಿಗರಿಗೆ ಸಂಬಂಧಿಸಿದ ಜಟಾಪಟಿ ಶುರುವಾಗಿದೆ. ಅಕ್ರಮ ವಲಸಿಗರನ್ನು ಹೊತ್ತು ತಂದಿದ್ದ ಅಮೆರಿಕದ 2 ವಿಮಾನಗಳನ್ನು ಕೊಲಂಬಿಯಾ ತನ್ನ ನೆಲದಲ್ಲಿ ಇಳಿಯಲು ಅನುಮತಿ ಕೊಟ್ಟಿರಲಿಲ್ಲ. ಇದರಿಂದ ಕುಪಿತಗೊಂಡ ಟ್ರಂಪ್, ಕೊಲಂಬಿಯಾದ ಎಲ್ಲ ಸರಕುಗಳ ಮೇಲೆಯೂ ಶೇ.50ರಷ್ಟು ಸುಂಕ ಹೇರುವುದಾಗಿ ಬೆದರಿಕೆಯೊಡ್ಡಿದ್ದರು. ಈ ಬೆದರಿಕೆಗೆ ಮಣಿದ ಕೊಲಂಬಿಯಾ ಸರ್ಕಾರ, ಟ್ರಂಪ್ ಅವರ ಎಲ್ಲ ಷರತ್ತುಗಳನ್ನೂ ಒಪ್ಪಿಕೊಂಡಿರುವುದಾಗಿ ಸೋಮವಾರ ತಿಳಿಸಿದೆ.