ತಿರುವನಂತಪುರಂ: ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಮನನೊಂದ ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. ತ್ರಿಕ್ಕನ್ನಪುರಂ ನಿವಾಸಿ ಆನಂದ್ ಕೆ. ತಂಪಿ ಮೃತರು. ತಮ್ಮ ನಿವಾಸದ ಬಳಿಯ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
ತಿರುವನಂತಪುರಂ ನಗರ ಪಾಲಿಕೆಯ ತ್ರಿಕ್ಕನ್ನಪುರಂ ವಾರ್ಡ್ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಆನಂದ್ ತಂಪಿ ಆಶಿಸಿದ್ದರು. ಆದರೆ, ಬಿಜೆಪಿ ಬಿಡುಗಡೆ ಮಾಡಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವುದನ್ನು ಕಂಡು ಅವರು ತೀವ್ರವಾಗಿ ನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪಟ್ಟಿಯಲ್ಲಿ ಹೆಸರು ಕಾಣದ ಬಳಿಕ, ತಾವು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು. ಶನಿವಾರ ಮಧ್ಯಾಹ್ನ, ತಮ್ಮ ಸ್ನೇಹಿತರಿಗೆ ವಾಟ್ಸ್ ಆ್ಯಪ್ ಸಂದೇಶ ಕಳುಹಿಸಿದ್ದ ತಂಪಿ, ಆರ್ಎಸ್ಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿ, ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು.
ಮರಳು ಮಾಫಿಯಾದ ಆರೋಪ
ತಂಪಿ ತಮ್ಮ ಸಂದೇಶದಲ್ಲಿ, “ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆಯನ್ನು ಆರ್ಎಸ್ಎಸ್ ಕಾರ್ಯಕರ್ತರ ಬಳಿ ವ್ಯಕ್ತಪಡಿಸಿದ್ದೆ. ಆದರೆ, ಮರಳು ಸಾಗಾಣಿಕೆ ಮಾಫಿಯಾದೊಂದಿಗೆ ಸಂಪರ್ಕ ಹೊಂದಿರುವ ಕೆಲವು ಸ್ಥಳೀಯ ನಾಯಕರ ಹಿತಾಸಕ್ತಿಯಿಂದಾಗಿ ನನಗೆ ಟಿಕೆಟ್ ನಿರಾಕರಿಸಲಾಗಿದೆ” ಎಂದು ಆರೋಪಿಸಿದ್ದಾರೆ. ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ, ನನ್ನ ಸ್ನೇಹಿತರು ನನ್ನಿಂದ ದೂರ ಸರಿಯಲು ಆರಂಭಿಸಿದ್ದು ಕೂಡ ಬೇಸರಕ್ಕೆ ಕಾರಣವಾಯಿತು ಎಂದು ಅವರು ಹೇಳಿಕೊಂಡಿದ್ದಾರೆ. ಸಂದೇಶ ನೋಡಿದ ತಕ್ಷಣ ಸ್ನೇಹಿತರು ಅವರ ಮನೆಗೆ ಧಾವಿಸಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಅವರು ಮೃತಪಟ್ಟಿದ್ದಾರೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಬಿಜೆಪಿ ನಾಯಕರು, “ತಂಪಿ ಟಿಕೆಟ್ಗಾಗಿ ನಮ್ಮನ್ನು ಎಂದಿಗೂ ಸಂಪರ್ಕಿಸಿರಲಿಲ್ಲ. ಅವರ ಸಾವನ್ನು ಟಿಕೆಟ್ ನಿರಾಕರಣೆಗೆ ತಳುಕು ಹಾಕುವುದು ಸರಿಯಲ್ಲ” ಎಂದಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್, “ಘಟನೆಯ ಬಗ್ಗೆ ತಿಳಿದು ಆಘಾತವಾಗಿದೆ. ಜಿಲ್ಲಾಧ್ಯಕ್ಷರಿಂದ ಮಾಹಿತಿ ಪಡೆದಿದ್ದು, ವಾರ್ಡ್ನಿಂದ ಬಂದಿದ್ದ ಶಾರ್ಟ್ಲಿಸ್ಟ್ನಲ್ಲಿ ಅವರ ಹೆಸರು ಇರಲಿಲ್ಲ. ಆದರೂ ನಾವು ಘಟನೆಯನ್ನು ಪರಿಶೀಲಿಸುತ್ತೇವೆ” ಎಂದು ಹೇಳಿದ್ದಾರೆ. ಮತ್ತೊಂದೆಡೆ, ಬಿಜೆಪಿ ಟಿಕೆಟ್ ನಿರಾಕರಿಸಿದ ನಂತರ ತಂಪಿ ತಮ್ಮನ್ನು ಸಂಪರ್ಕಿಸಿ ಬೆಂಬಲ ಕೋರಿದ್ದರು ಎಂದು ಶಿವಸೇನೆ ನಾಯಕರು ತಿಳಿಸಿದ್ದಾರೆ. ಅವರ ಪ್ರಕಾರ, ತಂಪಿ ಶಿವಸೇನೆ ಸದಸ್ಯತ್ವ ಪಡೆಯಲು ನಿರ್ಧರಿಸಿದ್ದರು ಮತ್ತು ಶನಿವಾರ ಬೆಳಿಗ್ಗೆ ಪ್ರಚಾರ ಕಾರ್ಯದಲ್ಲಿಯೂ ತೊಡಗಿದ್ದರು. ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಸಂಬಂಧಿಕರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಮಡಿಕೇರಿ | ಪತ್ನಿಗೆ ವಿಡಿಯೋ ಕಾಲ್ ಮಾಡಿ ಪತಿ ಆತ್ಮಹತ್ಯೆ



















