ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ (Bengaluru) ಡೆಂಗ್ಯೂ(Dengue) ಆತಂಕ ಹೆಚ್ಚಾಗುತ್ತಿದ್ದು, 27 ವರ್ಷದ ಯುವಕ ಸಾವನ್ನಪ್ಪಿರುವ ಸಂಗತಿಯನ್ನು ಬಿಬಿಎಂಪಿ (BBMP) ಖಚಿತಪಡಿಸಿದೆ.
ಸಿಲಿಕಾನ್ ಸಿಟಿಯ ಕಗ್ಗದಾಸಪುರದ 27 ವರ್ಷದ ಯುವಕ ಡೆಂಗ್ಯೂ ಸೋಂಕಿನಿಂದ ಸಾವನ್ನಪ್ಪಿರುವುದಾಗಿ ಬಿಬಿಎಂಪಿ ಹೆಲ್ತ್ ಆಡಿಟ್ (Health Audit) ಹೇಳಿಕೆಯಲ್ಲಿ ತಿಳಿಸಿದೆ.

ಶುಕ್ರವಾರವಷ್ಟೇ ಇಬ್ಬರು ಡೆಂಗ್ಯೂ ಶಂಕಿತ ವ್ಯಕ್ತಿಗಳು ಸಾವನ್ನಪ್ಪಿದ್ದರು. ಇದರ ಬೆನ್ನಲ್ಲಿಯೇ ಈಗ ಯುವಕನೊಬ್ಬ ಬಲಿಯಾಗಿದ್ದು, ಆತಂಕ ಮನೆ ಮಾಡುತ್ತಿದ. ಆದರೆ 80 ವರ್ಷದ ವೃದ್ಧೆಯ ಸಾವಿಗೆ ಡೆಂಗ್ಯೂ ಕಾರಣವಲ್ಲ ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ. 80ರ ವೃದ್ಧೆಯ ಸಾವಿಗೆ ಕಾರಣ ಕ್ಯಾನ್ಸರ್ ಎಂದೂ ಬಿಬಿಎಂಪಿ ಹೆಲ್ತ್ ಆಡಿಟ್ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಹೊಸದಾಗಿ 213 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿವೆ. ಜೂನ್ ತಿಂಗಳಲ್ಲಿ 1,742 ಜನ ಡೆಂಗ್ಯೂ ಸೊಂಕಿಗೆ ಒಳಗಾದಂತಾಗಿದೆ. ಮಹಿಳೆಯರು ಮತ್ತು ಮಕ್ಕಳು ಡೆಂಗ್ಯೂ ಸೋಂಕಿಗೆ ಬೇಗ ಒಳಗಾಗುತ್ತಿದ್ದಾರೆ ಎಂದು ಹೆಲ್ತ್ ಆಡಿಟ್ ಹೇಳಿದೆ. ಗರ್ಭಿಣಿಯರು ಡೆಂಗ್ಯೂ ಸೋಂಕಿಗೆ ಹೆಚ್ಚು ಬೇಗ ಒಳಗಾಗುತ್ತಿದ್ದು, ತುಂಬಾ ಜಾಗೃತವಾಗಿರುವಂತೆ ವೈದ್ಯರು ಹೇಳುತ್ತಿದ್ದಾರೆ.
