ಬೆಂಗಳೂರು: ಸಾರ್ವಜನಿಕರ ವಿರೋಧದಿಂದಾಗಿ ಪಾರ್ಕಿಂಗ್ ಶುಲ್ಕ ಪರಿಷ್ಕರಣೆಗೆ ಬಿಬಿಎಂಪಿ ಮುಂದಾಗಿದ್ದು, ಪ್ರಸ್ತಾವನೆ ಸಲ್ಲಿಕೆ ಮಾಡಿದೆ.
ಈ ಕುರಿತು ಡಿಸಿಎಂಗೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಕೆ ಮಾಡಿದೆ. ಹೀಗಾಗಿ ಈಗ ಡಿಸಿಎಂ ಅಂಗಳದಲ್ಲಿ ಪಾರ್ಕಿಂಗ್ ಶುಲ್ಕ ಸಮಸ್ಯೆ ಬಿದ್ದಿದೆ. ಈಗಾಗಲೇ ವಸತಿ ವಲಯಕ್ಕೆ ಚದರಡಿಗೆ 2 ರೂ, ವಸತಿಯೇತರ ಪ್ರದೇಶಗಳ ಚದರಾಡಿಗೆ 3 ರೂ.ಗಳನ್ನು ಸರ್ಕಾರ ನಿಗದಿ ಮಾಡಿದೆ.
ಸರ್ಕಾರದ ನಡೆಗೆ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ವಸತಿ ಕಟ್ಟಡ ಮಾಲೀಕರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಸರ್ಕಾರ ನಿಗದಿ ಮಾಡಿರುವ ದರ ಸಾರ್ವಜನಿಕರಿಗೆ ಹೊರೆಯಾಗುತ್ತದೆ. ಹೀಗಾಗಿ ಮತ್ತೆ ನಿರ್ಧಾರವನ್ನು ಪರಿಷ್ಕರಣೆ ಮಾಡುವಂತೆ ಸಾವಿರಾರು ಆಕ್ಷೇಪಣೆ ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಕೆ ಮಾಡಿದ್ದಾರೆ.
ಈಗಾಗಲೇ ದಿನನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆಯಾಗಿದೆ. ಡೀಸೆಲ್, ಪೆಟ್ರೋಲ್ ಬೆಲೆ ಕೂಡ ಏರಿಕೆಯಾಗಿವೆ. ಇದರೊಂದಿಗೆ ಪಾರ್ಕಿಂಗ್ ಶುಲ್ಕ ನಿಗದಿ ಮಾಡುವುದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗುತ್ತದೆ. ಕೂಡಲೇ ಪಾರ್ಕಿಂಗ್ ಶುಲ್ಕ ಹಿಂಪಡೆಯಬೇಕೆಂದು ಜನರು ಆಕ್ಷೇಪಣೆ ಸಲ್ಲಿಕೆ ಮಾಡಿದ್ದಾರೆ. ಮುಂದಿನ ವಾರ ಪರಿಷ್ಕೃತ ಪಾರ್ಕಿಂಗ್ ಶುಲ್ಕ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.