ಚಾಮರಾಜನಗರ : ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಕಲಿ ಪತ್ರಕರ್ತರ ಹಾವಳಿ ಹೆಚ್ಚಾಗಿದ್ದು, ಪತ್ರಕರ್ತ ಎಂಬ ಹಣೆ ಪಟ್ಟಿ ಹೊತ್ತು ರಸ್ತೆ ಕಾಮಗಾರಿ ಸಂಬಂಧ ಮೇಸ್ತ್ರಿ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಡಿಮ್ಯಾಂಡ್ ಇಟ್ಟಿರುವ ಘಟನೆ ಯಳಂದೂರು ತಾಲೂಕಿನಲ್ಲಿ ನಡೆದಿದೆ. ಹಣ ಕೊಡಲು ಒಪ್ಪದ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದ್ದು, ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಯಳಂದೂರಿನಿಂದ ಬಿ.ಆರ್. ಹಿಲ್ಸ್ ನಡುವೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಪತ್ರಕರ್ತರು ಎಂದು ಹೇಳಿಕೊಂಡಿದ್ದ ಮೂವರು ಆರೋಪಿಸಿದ್ದಾರೆ. ಅಲ್ಲದೆ, ಈ ಸಂಬಂಧ ಕಾಮಗಾರಿಯಲ್ಲಿ ಭಾಗಿಯಾಗಿದ್ದ ಚೆಲುವರಾಜ್ ಎಂಬ ಮೇಸ್ತ್ರಿ ಬಳಿ ಪುನೀತ್, ಶೇಖರ್ ಹಾಗೂ ಪುರುಷೋತ್ತಮ್ ಎಂಬವರು ಹಣಕ್ಕಾಗಿ ಡಿಮ್ಯಾಂಡ್ ಕೂಡ ಮಾಡಿದ್ದರು. ಇದಕ್ಕೆ ಒಪ್ಪದ ಆತನ ಮೇಲೆ ಮನಸೋ ಇಚ್ಚೇ ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದರು.
ಜನರಿಗೆ ಅಷ್ಟಾಗಿ ಚಿರಪರಿಚಿತವಲ್ಲದ ಯೂಟ್ಯೂಬ್ ಚಾನೆಲ್ ಹೆಸರು ಹೇಳಿ ಪತ್ರಕರ್ತರು ಎಂದು ಪರಿಚಯಿಸಿಕೊಂಡಿದ್ದ ಆರೋಪಿಗಳು, ಇಲ್ಲಿ ಕಾಮಗಾರಿ ನಡೆಯ ಬೇಕಿದ್ರೆ ನಮ್ಗೆ 2.5 ಲಕ್ಷ ರೂಪಾಯಿ ಹಣ ನೀಡಲೇ ಬೇಕು. ಇಲ್ಲದೆ ಹೋದರೆ ಯಾವುದೇ ಕಾರಣಕ್ಕೂ ಈ ಕಾಮಗಾರಿ ಮಾಡಲು ಬಿಡುವುದಿಲ್ಲವೆಂದು ಮೇಸ್ತ್ರಿ ಚೆಲುವರಾಜ್ಗೆ ಅವಾಜ್ ಹಾಕಿದ್ದರು. ಈ ವೇಳೆ ಆತ ತನಗೂ ಇದಕ್ಕೂ ಸಂಬಂಧವಿಲ್ಲ. ನೀವು ಗುತ್ತಿಗೆದಾರ ಹಾಗೂ ಎಂಜಿನಿಯರ್ ಸಂಪರ್ಕಿಸಿ ಎಂದು ಹೇಳಿದ ಕಾರಣ ರೊಚ್ಚಿಗೆದ್ದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಯಳಂದೂರು ಠಾಣಾ ಪೊಲೀಸರು ಮೂರು ಮಂದಿ ನಕಲಿ ಪತ್ರಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಇದನ್ನೂ ಓದಿ : ಹಾಸನದಲ್ಲಿ ಬೆಚ್ಚಿಬೀಳಿಸುವ ಘಟನೆ | ಶಾಲಾ ಬಾಲಕಿ ಹಿಂಬಾಲಿಸಿ ಆತಂಕ ಸೃಷ್ಟಿಸಿದ ಕಿಡಿಗೇಡಿ



















