ಬೆಂಗಳೂರು: ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಸರ್ಕಾರ ಮೆಟ್ರೋ ನಿಲ್ದಾಣ ಸ್ಥಾಪಿಸಬೇಕೆಂಬುದು ಸುತ್ತಮುತ್ತಲಿನ ಗ್ರಾಮಸ್ಥರ ಒತ್ತಾಯವಾಗಿದ್ದು, ಈ ಭಾಗದಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಅತ್ಯವಶ್ಯಕವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಎಚ್.ಸಿ.ತಮ್ಮೇಶ್ ಗೌಡ ಆಗ್ರಹಿಸಿದ್ದಾರೆ.
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಬಳಿ ಮೆಟ್ರೋ ರೈಲ್ವೆ ನಿಲ್ದಾಣ ಸ್ಥಾಪಿಸಬೇಕೆಂದು ಒತ್ತಾಯಿಸಿ ಸುತ್ತಮುತ್ತಲಿನ ಗ್ರಾಮಸ್ಥರು, ಮುಖಂಡರು, ತಮ್ಮೇಶ್ ಗೌಡರ ನೇತೃತ್ವದಲ್ಲಿ ಹುಣಸಮಾರನಹಳ್ಳಿ ಗ್ರಾಮದ ಬಳಿ ಮುಂದಿನ ಹೋರಾಟದ ಪೂರ್ವಭಾವಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ಪ್ರತಿಷ್ಠಿತ ರಸ್ತೆ ಇದಾಗಿದೆ. ಈ ವ್ಯಾಪ್ತಿಯಲ್ಲಿ ಸುಮಾರು 40 ಗ್ರಾಮಗಳಿವೆ. ಸುಮಾರು ಒಂದೂವರೆ ಲಕ್ಷಕ್ಕಿಂತ ಅಧಿಕ ಜನರು ವಾಸಿಸುತ್ತಿದ್ದಾರೆ. ದೇವನಹಳ್ಳಿ ಡಿ.ಸಿ.ಕಚೇರಿಗೆ ತೆರಳುವ ರಸ್ತೆ, ರಾಜಾನುಕುಂಟೆ, ಸಿಂಗನಾಯಕನಹಳ್ಳಿ ಗ್ರಾಮಗಳಿಗೆ ತೆರಳುವ ಸಂಪರ್ಕ ರಸ್ತೆ, ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಆಂಧ್ರಪ್ರದೇಶಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸಹ ಈ ಮಾರ್ಗದಲ್ಲೇ ಇವೆ ಎಂದು ಗಮನ ಸೆಳೆದರು.
ಆನೇಕಲ್ ರಸ್ತೆ, ಕನಕಪುರ ರಸ್ತೆ, ಕೆ.ಆರ್.ಪುರ, ಹೊಸಕೋಟೆ ರಸ್ತೆ ಹೀಗೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿ ಒಂದು ಅಥವಾ ಎರಡು ಕಿ.ಮೀ.ಗೆ ಒಂದರಂತೆ ಮೆಟ್ರೋ ರೈಲು ನಿಲ್ದಾಣ ಸ್ಥಾಪಿಸಿರುವ ಬಿ.ಎಂ.ಆರ್.ಸಿ.ಎಲ್. ಆರಂಭದಲ್ಲಿ ಬೆಟ್ಟಹಲಸೂರು ಕ್ರಾಸ್ ನಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಸಕಲ ಸಿದ್ಧತೆ ನಡೆಸಿತ್ತು. ಅಲ್ಲದೆ, ನಿಲ್ದಾಣ ಸ್ಥಾಪನೆಗಾಗಿ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಪರಿಹಾರದ ಹಣವನ್ನು ಸಹ ಬಿಡುಗಡೆ ಮಾಡಿದೆ. ಆದರೆ ದಿಢೀರನೆ ಮೆಟ್ರೋ ನಿಲ್ದಾಣ ಸ್ಥಾಪನೆ ಯೋಜನೆ ಕೈಬಿಟ್ಟಿರುವುದರ ಹಿಂದೆ ಅದ್ಯಾವ ಹಿತಾಸಕ್ತಿ, ಕಾಣದ ಕೈಗಳು ಕೆಲಸ ಮಾಡಿವೆ ಎಂಬುದು ಬಹಿರಂಗವಾಗಬೇಕಿದೆ ಎಂದು ಅವರು ಆಗ್ರಹಿಸಿದರು.
ನಿಲ್ದಾಣ ಸ್ಥಾಪಿಸದಿದ್ದರೆ ಮೆಟ್ರೋ ಓಡಾಟಕ್ಕೆ ಬಿಡುವುದಿಲ್ಲ
ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆಗಾಗಿ ಸರ್ಕಾರದ ಕಣ್ತೆರಸಲು ಇಂದು ಪೂರ್ವಭಾವಿ ಸಭೆ ಕರೆದಿದ್ದೇವೆ. ಇಲ್ಲಿ ಮೆಟ್ರೋ ನಿಲ್ದಾಣ ಸ್ಥಾಪನೆ ಆಗದಿದ್ದರೆ, ಇಲ್ಲಿನ ಜನತೆಗೆ ಉಪಯೋಗವಾಗದ ಮೆಟ್ರೋ ರೈಲ್ವೆ ಅವಶ್ಯಕತೆ ಇದೆಯೇ ತಮ್ಮೇಶ್ ಗೌಡ ಎಂದು ಪ್ರಶ್ನಿಸಿದರು. ಜನೋಪಯೋಗಿ ಆಗದ ಮೆಟ್ರೋ ಯೋಜನೆಯೇ ಈ ಭಾಗಕ್ಕೆ ಬೇಡ ಎಂದು ಆಗ್ರಹಿಸಿದ್ದು, ಒಂದೊಮ್ಮೆ ಸ್ಥಳೀಯ ನಾಗರೀಕರ ಬೇಡಿಕೆಯನ್ನು ಧಿಕ್ಕರಿಸಿ ಸರ್ಕಾರ ಅಥವಾ ಬಿ.ಎಂ.ಆರ್.ಸಿ.ಎಲ್. ಮುಂದುವರೆದರೆ ಮೆಟ್ರೋ ರೈಲು ಓಡಾಟಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಬ್ಯಾಟರಾಯನಪುರ ಕ್ಷೇತ್ರದ ಶಾಸಕರು ಹಾಗೂ ಕಂದಾಯ ಸಚಿವರು ಆಗಿರುವ ಕೃಷ್ಣಬೈರೇಗೌಡ ಅವರು ಈ ಕುರಿತಂತೆ ಕೆಲವು ರೈತ ಮುಖಂಡರು ಕೊಟ್ಟ ಮನವಿ ಪತ್ರಕ್ಕೆ ಸಹಿ ಹಾಕಿ ಕೊಟ್ಟಿರುವುದನ್ನು ಬಿಟ್ಟರೆ ಬೇರ ಯಾವ ಅಗತ್ಯ ಕ್ರಮ ಕೈಗೊಳ್ಳುವ ಗೋಜಿಗೆ ಹೋಗದಿರುವುದು ವಿಷಾದಕರ ಸಂಗತಿ ಎಂದು ಅವರು ಟೀಕಿಸಿದರು.
ಬ್ಯಾಟರಾಯನಪುರ ಕ್ಷೇತ್ರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಬ್ಬಾಗಿಲಾಗಿದ್ದು, ಕ್ಷೇತ್ರದ ಹದಿನೈದು ವರ್ಷಗಳ ಹಿಂದಿನ ಜನಸಾಂದ್ರತೆಗೂ ಈಗಿನ ಜನಸಾಂದ್ರತೆಗೂ ಅಜಗಜಾಂತರ ವ್ಯತ್ಯಾಸವಿದೆ. ಕ್ಷೇತ್ರದ ಭವಿಷ್ಯದ ಜನಸಾಂದ್ರತೆ ಮತ್ತು ಬೆಳವಣಿಗೆಯನ್ನು ಅರಿತು ಬೆಟ್ಟಹಲಸೂರು ಕ್ರಾಸ್ ಮತ್ತು ಚಿಕ್ಕಜಾಲ ಗ್ರಾಮಗಳಲ್ಲಿ ಮೆಟ್ರೋ ನಿಲ್ದಾಣ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದ್ದ ಮಾನ್ಯ ಕಂದಾಯ ಸಚಿವರ ನಿರ್ಲಕ್ಷ್ಯ ಧೋರಣೆ ಖಂಡನೀಯ ಎಂದರು.