ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದರೂ ಪ್ರಧಾನಿ ನರೇಂದ್ರ ಮೋದಿಯವರು ವಿರಮಿಸುವ ಮೂಡ್‌ನಲ್ಲಿಲ್ಲ. ಮತ್ತಷ್ಟು ರಾಜ್ಯಗಳಲ್ಲಿ ಜಯಭೇರಿ ಬಾರಿಸುವ ತವಕದೊಂದಿಗೆ ಅವರು ಈಗ ಚುನಾವಣೆ ಎದುರಿಸಲಿರುವ ಬೇರೆ ರಾಜ್ಯಗಳತ್ತ ಗಮನ ಹರಿಸಿದ್ದಾರೆ. ಅದರಂತೆ ಚುನಾವಣೆ ನಡೆಯಲಿರುವ ಮೂರು ರಾಜ್ಯಗಳಿಗೆ ಅವರು ಈ ತಿಂಗಳಲ್ಲಿ ಭೇಟಿ ನೀಡಲಿದ್ದು, ಬಿಹಾರ, ಅಸ್ಸಾಂ ಮತ್ತು ತಮಿಳುನಾಡು ವಿಧಾನಸಭೆ ಚುನಾವಣೆಗಳಿಗೆ ರಣಕಹಳೆಯನ್ನು ಮೊಳಗಿಸಲಿದ್ದಾರೆ.
ಫೆಬ್ರವರಿ 24 ರಂದು ಪೂರ್ವ ಬಿಹಾರದ ಭಾಗಲ್ಪುರಕ್ಕೆ ಮತ್ತು ಅದೇ ದಿನ ಅಸ್ಸಾಂಗೆ ಪ್ರಧಾನಿ ಭೇಟಿ ನೀಡಲಿದ್ದು, ಈಗಾಗಲೇ ಇದಕ್ಕಾಗಿ ಬಿಜೆಪಿ ಸಿದ್ಧತೆಗಳನ್ನು ಆರಂಭಿಸಿದೆ.
ಬಿಹಾರದಲ್ಲಿ ಈ ವರ್ಷದ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅಸ್ಸಾಂ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಈ ತಿಂಗಳಾಂತ್ಯಕ್ಕೆ ಅಂದರೆ ಫೆಬ್ರವರಿ 28 ರಂದು, ತಮಿಳುನಾಡಿನ ರಾಮೇಶ್ವರಂ ಅನ್ನು ಮುಖ್ಯ ಭೂಭಾಗದೊಂದಿಗೆ ಸಂಪರ್ಕಿಸುವ ಹೊಸ ಪಂಬನ್ ಸೇತುವೆಯನ್ನು ಉದ್ಘಾಟಿಸಲು ಪ್ರಧಾನಿ ಮೋದಿ ತಮಿಳುನಾಡಿಗೆ ಭೇಟಿ ನೀಡುವ ನಿರೀಕ್ಷೆಯಿದೆ.
ಇನ್ನು ಪ್ರಧಾನಿ ಮೋದಿಯವರು ಭೇಟಿ ನೀಡುವ ಮೂಲಕ ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಬಿಹಾರ ಮತ್ತು ಅಸ್ಸಾಂ ಬಿಜೆಪಿ ನಾಯಕರು ಹೇಳಿದ್ದಾರೆ. ಕಳೆದ 10 ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಹಾರದಲ್ಲೂ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಜೊತೆಗೆ ಸೇರಿಕೊಂಡು ಬಿಜೆಪಿ ಅಧಿಕಾರ ನಡೆಸುತ್ತಿದೆ. ಫೆ.24 ರಂದು ಭಾಗಲ್ಪುರದಲ್ಲಿ ನಡೆಯುವ ಬೃಹತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೇರಿ ಹಿರಿಯ ಬಿಜೆಪಿ ನಾಯಕರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಪೂರ್ವ ಬಿಹಾರದ ಭಾಗಲ್ಪುರಕ್ಕೆ ಪ್ರಧಾನಿಯವರ ಭೇಟಿ ಮಹತ್ವದ್ದು. ಏಕೆಂದರೆ ಇಲ್ಲಿ ಬಿಜೆಪಿಯ ಮತ ಪ್ರಮಾಣ ಕಡಿಮೆಯಿದೆ. ಈ ಪ್ರದೇಶದ ಮತದಾರರಲ್ಲಿ ಬಹುಪಾಲು ಇರುವುದು ರೈತರು. ಈ ರೈತರನ್ನು ಸೆಳೆಯುವ ಉದ್ದೇಶದಿಂದಲೇ ಪ್ರಧಾನಿ ಮೋದಿಯವರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತನ್ನು ಭಾಗಲ್ಪುರದಿಂದೇ ಬಿಡುಗಡೆ ಮಾಡಲಿದ್ದಾರೆ. ಜತೆಗೆ ಕೆಲವು ಅನ್ನದಾತರನ್ನು ಗೌರವಿಸಲಿದ್ದಾರೆ. ಅಲ್ಲದೇ ಭಾಗಲ್ಪುರದಲ್ಲಿ ಹೊಸ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಲಿದ್ದಾರೆ.
ಭಾಗಲ್ಪುರದಿಂದ ಎರಡು ದಿನಗಳ ಭೇಟಿಗಾಗಿ ಪ್ರಧಾನಿ ಮೋದಿ ಅಸ್ಸಾಂಗೆ ತೆರಳಲಿದ್ದು, ರಾಜ್ಯದಲ್ಲಿ 3 ಲಕ್ಷ ಕೋಟಿ ರೂ.ಗಳ ಹೂಡಿಕೆಯ ಗುರಿಯನ್ನು ಹೊಂದಿರುವ ‘ಅಡ್ವಾಂಟೇಜ್ ಅಸ್ಸಾಂ 2.0’ ಬಂಡವಾಳ ಹೂಡಿಕೆ ಶೃಂಗಸಭೆಯನ್ನು ಉದ್ಘಾಟಿಸಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ 8,000 ಕ್ಕೂ ಹೆಚ್ಚು ಕುಶಲಕರ್ಮಿಗಳಿಂದ ಮೆಗಾ ಜುಮರ್ ನೃತ್ಯ ಪ್ರದರ್ಶನ ನಡೆಯಲಿದೆ. 2026ರಲ್ಲಿ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಅದಕ್ಕೂ ಮೊದಲೇ ಅಸ್ಸಾಂ ಮತಗಳನ್ನು ಸೆಳೆಯುವುದು ಮೋದಿ ಉದ್ದೇಶವಾಗಿದೆ.