ದೆಹಲಿ : ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಎದುರಿನಲ್ಲಿರುವ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಹಂಚಿಕೆ ಮಾಡಲಾಗಿರುವ ಅಪಾರ್ಟ್‌ಮೆಂಟ್ ಸಂಕೀರ್ಣವಾದ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್ಸ್‌ನಲ್ಲಿಇಂದು ಮಧ್ಯಾಹ್ನ ಭಾರೀ ಬೆಂಕಿ ಅವಘಡ ಸಂಭವಿಸಿದೆ.

ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿರುವ ಈ ವಸತಿ ಸಮುಚ್ಚಯದಲ್ಲಿ ಮಧ್ಯಾಹ್ನ 1.22ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ಕೂಡಲೇ, ದೆಹಲಿ ಅಗ್ನಿಶಾಮಕ ದಳವು (DFS) 14 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ್ದು, ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ನಂತರ 2.10ಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.
ಅಗ್ನಿಶಾಮಕ ದಳದ ಅಧಿಕಾರಿಗಳು ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅಪಾರ್ಟ್‌ಮೆಂಟ್‌ನ ಕೆಲ ನಿವಾಸಿಗಳು, ಕೆಲವು ಮಕ್ಕಳು ಈ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಹೆಚ್ಚಿನ ಅಧಿಕೃತ ದೃಢೀಕರಣ ಬರಬೇಕಿದೆ. ಒಬ್ಬ ನಿವಾಸಿ (ಅನಿಲ್ ಕುಮಾರ್) ಮಾತನಾಡಿ, “ಇಬ್ಬರು ಬಾಲಕಿಯರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಹೇಳಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣದ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಸಿಬ್ಬಂದಿ ನೀಡಿದ ಹೇಳಿಕೆಗಳು, ಸ್ಫೋಟಕ ಸತ್ಯವನ್ನು ಹೊರಹಾಕಿವೆ.
ಅಪಾರ್ಟ್‌ಮೆಂಟ್‌ನ ಸ್ಟಿಲ್ಟ್ ಮಹಡಿಯಲ್ಲಿ ಸಂಗ್ರಹಿಸಲಾಗಿದ್ದ ಕೆಲವು ಸೋಫಾಗಳು ಅಥವಾ ಗೃಹೋಪಯೋಗಿ ವಸ್ತುಗಳ ಮೇಲೆ ಪಟಾಕಿ ಸಿಡಿದು ಬೆಂಕಿ ಹತ್ತಿಕೊಂಡಿದೆ ಎಂದು ಹಲವರು ದೂರಿದ್ದಾರೆ. ಡಿಎಫ್‌ಎಸ್‌ನ ಅಧಿಕಾರಿ ಭೂಪೇಂದ್ರ ಪ್ರಕಾಶ್ ಅವರು, “ನಾವು ತಲುಪಿದಾಗ, ಸ್ಟಿಲ್ಟ್ ಮಹಡಿಯಲ್ಲಿನ ಮನೆಯ ಸಂಗ್ರಹ ವಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಜ್ವಾಲೆಗಳು ಮೇಲಕ್ಕೆ ಏರುತ್ತಿದ್ದವು, ಇದು ಮೇಲಿನ ಮಹಡಿಗಳಿಗೆ ಬಾಹ್ಯ ಹಾನಿಯನ್ನುಂಟುಮಾಡಿದೆ,” ಎಂದು ತಿಳಿಸಿದ್ದಾರೆ.