ನವದೆಹಲಿ: ದೆಹಲಿಯ ದಕ್ಷಿಣ ಭಾಗದ ಆಯಾ ನಗರದ ಬಳಿ ನಡೆದ ಕುಟುಂಬ ಕಲಹವು 52 ವರ್ಷದ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾಗಿದೆ. ಅಚ್ಚರಿಯೆಂದರೆ, ಹತ್ಯೆಗೀಡಾದ ವ್ಯಕ್ತಿಯನ್ನು ರತ್ನ ಲೋಹಿಯಾ ಎಂದು ಗುರುತಿಸಲಾಗಿದ್ದು, ಅವರ ಮೃತದೇಹದೊಳಗೆ 69 ಗುಂಡುಗಳು ಪತ್ತೆಯಾಗಿದೆ.
ಹಾಡಹಗಲೇ ಗುಂಡಿನ ದಾಳಿ
ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟ ರತ್ನ ಲೋಹಿಯಾ ಅವರನ್ನು ಕಪ್ಪು ಬಣ್ಣದ ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಬಂದ ಮೂವರು ದಾಳಿಕೋರರು ಮಾರುಕಟ್ಟೆ ಹತ್ತಿರ ತಡೆದು, ಗುಂಡಿನ ಮಳೆಗರೆದಿದ್ದಾರೆ. ರತ್ನ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಪೊಲೀಸರು ಸ್ಥಳದಿಂದ ಖಾಲಿ ಗುಂಡುಗಳು ಮತ್ತು ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಸಿ.ಸಿ.ಟಿ.ವಿ ದೃಶ್ಯಾವಳಿಗಳ ಪ್ರಕಾರ, ಕಾರಿನ ನಂಬರ್ ಪ್ಲೇಟ್ ಕಿತ್ತುಹಾಕಲಾಗಿತ್ತು, ಇದು ವ್ಯವಸ್ಥಿತ ಹತ್ಯೆಯೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕುಟುಂಬ ಕಲಹದ ಹಿನ್ನೆಲೆ
ಪೊಲೀಸ್ ತನಿಖೆಯ ಪ್ರಾಥಮಿಕ ವರದಿಯಂತೆ, ಈ ಕೊಲೆ ರಣಬೀರ್ ಲೋಹಿಯಾ ಮತ್ತು ಅವರ ಬಂಧುಗಳಿಂದ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಇಬ್ಬರ ನಡುವಿನ ವೈಷಮ್ಯ ಕಳೆದ ಕೆಲವು ತಿಂಗಳಿಂದ ಹೆಚ್ಚಾಗಿತ್ತು. ಮೇ 15ರಂದು ರಣಭೀರ್ ಅವರ ಪುತ್ರ ಅರುಣ್ ಲೋಹಿಯಾ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ಸವಾರರು ಗುಂಡಿಕ್ಕಿ ಕೊಂದ ಪ್ರಕರಣದಲ್ಲಿ ರತ್ನ ಅವರ ಹಿರಿಯ ಪುತ್ರ ದೀಪಕ್ ಲೋಹಿಯಾ ಬಂಧಿತರಾಗಿದ್ದರು. ಈ ಹಳೆಯ ಘಟನೆಯ ಪ್ರತೀಕಾರಕ್ಕಾಗಿ ರಣಭೀರ್ ಕುಟುಂಬವೇ ಈ ಹತ್ಯೆ ಮಾಡಿಸಿರುವುದಾಗಿ ಮೃತನ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಕುಟುಂಬದ ಆರೋಪವೇನು
ರತ್ನ ಅವರ ಪುತ್ರಿಯರು ಮಾತನಾಡಿ, “ನನ್ನ ತಂದೆಗೆ ಯಾರ ಜೊತೆಯೂ ವೈಯಕ್ತಿಕ ವೈಷಮ್ಯ ಇರಲಿಲ್ಲ. ಆದರೆ ರಣಭೀರ್ ಮತ್ತು ಅವರ ಸಂಬಂಧಿಕರು ನಮ್ಮ ಕುಟುಂಬಕ್ಕೆ ಕಳೆದ ಹಲವು ತಿಂಗಳಿಂದ ಬೆದರಿಸುತ್ತಿದ್ದರು,” ಎಂದು ಹೇಳಿದ್ದಾರೆ. ಎರಡು ತಲೆಮಾರಿನ ಯುವಕರ ಘರ್ಷಣೆಯಿಂದ ಆರಂಭವಾಗದ ಈ ವೈಷಮ್ಯ ಈಗಲೂ ಮುಂದುವರಿದಿದೆ ಎಂದು ಅವರು ಹೇಳಿದ್ದಾರೆ.
ಈ ಹತ್ಯೆಗೆ ಭಾರತೀಯ ಗ್ಯಾಂಗ್‌ಸ್ಟರ್‌ಗಳು ಅಲ್ಲದೆ ವಿದೇಶದಲ್ಲಿರುವ ಶೂಟರ್‌ಗಳಿಗೆ ಗುತ್ತಿಗೆ ನೀಡಿರುವ ಸುಳಿವು ಸಿಕ್ಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಅರಾಜಕತೆ : ಪತ್ರಿಕಾ ಕಚೇರಿಗಳಿಗೆ ಬೆಂಕಿ, 30 ಪತ್ರಕರ್ತರ ಸಾಹಸಮಯ ರಕ್ಷಣೆ



















