ನವದೆಹಲಿ: ದಶಕಗಳ ಕಾಲ ರಾಷ್ಟ್ರ ರಾಜಧಾನಿಯಲ್ಲಿ ಆಡಳಿತ ನಡೆಸಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಕಾರಣವೇನು? ಪಕ್ಷದ ನಾಯಕ ಅರವಿಂದ ಕೇಜ್ರಿವಾಲ್ ವರ್ಚಸ್ಸು ಕುಂದಿರುವುದು, ಅಭಿವೃದ್ಧಿ ಕೆಲಸಗಳು ಕುಂಠಿತವಾಗಿದ್ದು, ಭ್ರಷ್ಟಾಚಾರ ಆರೋಪಗಳು…. ಹೀಗೆ ಹಲವು ಪಟ್ಟಿಗಳನ್ನು ಮಾಡಬಹುದು. ಆದರೆ, ಇವೆಲ್ಲದಕ್ಕಿಂತಲೂ ಮುಖ್ಯವಾಗಿ ಕಾಂಗ್ರೆಸ್ ಮತ್ತು ಆಪ್ ನಡುವಿನ ವಿಭಜನೆಯೇ (Delhi Elections 2025) ಇಂದಿನ ಈ ಸ್ಥಿತಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎರಡೂ ಪಕ್ಷಗಳ ನಡುವಿನ ಕಾದಾಟವು ಪ್ರತಿಪಕ್ಷಗಳ ನಡುವಿನ ಒಗ್ಗಟ್ಟಿನ ಕೊರತೆಯನ್ನು ಎತ್ತಿ ತೋರಿಸಿದ್ದಲ್ಲದೆ, ಇಬ್ಬರ ಜಗಳ ಮೂರನೆಯವನಿಗೆ ಲಾಭ ಎಂಬಂತೆ ಕಾಂಗ್ರೆಸ್-ಆಪ್ ಫೈಟ್ ಬಿಜೆಪಿಗೆ ಭಾರೀ ಲಾಭವನ್ನು ತಂದುಕೊಟ್ಟಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ವಿರುದ್ಧ ಹೋರಾಡಲೆಂದೇ ರೂಪುಗೊಂಡಿದ್ದ ಇಂಡಿಯಾ ಒಕ್ಕೂಟದೊಳಗಿನ ಬಿಕ್ಕಟ್ಟು ದೆಹಲಿ ಚುನಾವಣೆ ವೇಳೆ ಜಗಜ್ಜಾಹೀರಾಯಿತು. ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಪ್ರತ್ಯೇಕವಾಗಿ ಸ್ಪರ್ಧಿಸುವುದಾಗಿ ಘೋಷಿಸಿಕೊಂಡವು. ಎರಡೂ ಪಕ್ಷಗಳು ಸ್ವಲ್ಪವೂ ಹೊಂದಾಣಿಕೆ ಮಾಡಿಕೊಳ್ಳದೇ ಎಲ್ಲ 70 ಕ್ಷೇತ್ರಗಳಲ್ಲೂ ಪ್ರತ್ಯೇಕವಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದವು. ಪರಿಣಾಮವಾಗಿ, ಬಿಜೆಪಿ ವಿರೋಧಿ ಮತಗಳೆಲ್ಲ ವಿಭಜನೆಗೊಂಡವು. ಆಮ್ ಆದ್ಮಿ ಪಕ್ಷಕ್ಕೆ ಮತ್ತೊಂದು ಸಂಕಷ್ಟ ಹಾಗೂ ಸವಾಲು ಎಂಬಂತೆ ಬಿಎಸ್ಪಿ, ಎಡಪಕ್ಷಗಳು, ಎಐಎಂಐಎಂ, ಆಜಾದ್ ಸಮಾಜ್ ಪಾರ್ಟಿ, ಎನ್‌ಸಿಪಿ ಮುಂತಾದ ಸಣ್ಣಪುಟ್ಟ ಪ್ರತಿಪಕ್ಷಗಳು ಕೂಡ ದಿಲ್ಲಿ ಕಣಕ್ಕೆ ಧುಮುಕಿ, ವಿಪಕ್ಷಗಳಿಗೆ ಬರುತ್ತಿದ್ದ ಮತ್ತಷ್ಟು ಮತಗಳನ್ನು ಒಡೆದವು. ಪರಸ್ಪರ ಆರೋಪ-ಪ್ರತ್ಯಾರೋಪ, ಕೆಸರೆರಚಾಟದಲ್ಲೇ ಪ್ರತಿಪಕ್ಷಗಳು ದಿನದೂಡಿದವು.
ಇದನ್ನೂ ಓದಿ: ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೇನು ಅನ್ಯಾಯವಾಗಿದೆ?
ಇನ್ನೊಂದು ಕಡೆ, ಎನ್‌ಡಿಎ ದಿಲ್ಲಿಯಲ್ಲಿ ಆರಂಭದಿಂದಲೂ ಒಗ್ಗಟ್ಟಿನ ಹೋರಾಟ ನಡೆಸಿತು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಂದ ಹಿಡಿದು ಕೇಂದ್ರ ಸಚಿವರಾದ ಅಮಿತ್ ಶಾ, ಜೆ.ಪಿ.ನಡ್ಡಾ, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಆದಿಯಾಗಿ ಪ್ರತಿಯೊಬ್ಬರು ಸಾಲು ಸಾಲು ರೋಡ್ ಶೋ, ಸಾರ್ವಜನಿಕ ಪ್ರಚಾರ ಸಭೆಗಳನ್ನು ನಡೆಸಿ ತಮ್ಮ ಮತಗಳನ್ನು ಗಟ್ಟಿಗೊಳಿಸುತ್ತಾ ಸಾಗಿದರು. ಇವೆಲ್ಲವೂ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿ, ದೆಹಲಿಯಲ್ಲಿ 27 ವರ್ಷಗಳ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು.