ನವದೆಹಲಿ: ಸುಮಾರು 27 ವರ್ಷಗಳ ಬಳಿಕ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುವತ್ತ ಹೆಜ್ಜೆ ಹಾಕುತ್ತಿದೆ. ದೆಹಲಿಯ ಒಟ್ಟು 70 ಕ್ಷೇತ್ರಗಳ ಪೈಕಿ ಬಿಜೆಪಿಯು 48 ಕ್ಷೇತ್ರಗಳಲ್ಲಿ ಭಾರಿ ಮುನ್ನಡೆ ಸಾಧಿಸಿದ್ದು, ಸರಳ ಬಹುಮತ ಪಡೆಯುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ, ಶನಿವಾರ ಸಂಜೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯುವ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಸುಮಾರು 27 ವರ್ಷಗಳ ಬಳಿಕ ಬಿಜೆಪಿಯು ಅಧಿಕಾರದ ಗದ್ದುಗೆ ಏರುತ್ತಿರುವ ಹಿನ್ನೆಲೆಯಲ್ಲಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಂಜೆ 7 ಗಂಟೆಗೆ ಸಂಭ್ರಮಾಚರಣೆ ನಡೆಯಲಿದ್ದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ ಆಮ್ ಆದ್ಮಿ ಪಕ್ಷದ ಘಟಾನುಘಟಿ ನಾಯಕರೇ ಹಿನ್ನಡೆಯಲ್ಲಿದ್ದಾರೆ. ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್, ಹಾಲಿ ಸಿಎಂ ಆತಿಶಿ ಸೇರಿ ಹಲವು ಗಣ್ಯ ನಾಯಕರು ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಹಿನ್ನಡೆಯಲಿದ್ದಾರೆ. ಇನ್ನು ಜಂಗ್ ಪುರ ವಿಧಾನಸಭೆ ಕ್ಷೇತ್ರದಲ್ಲಿ ಆಪ್ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರು ಸೋಲನುಭವಿಸಿದ್ದು, ಪಕ್ಷಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.
ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಕೇವಲ 21 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಆಡಳಿತ ವಿರೋಧಿ ಅಲೆಗೆ ಆಪ್ ದೆಹಲಿಯಲ್ಲಿ ಕೊಚ್ಚಿಕೊಂಡು ಹೋಗಿರುವುದು ಸಾಬೀತಾಗಿದೆ. ಇನ್ನು, ಕಳೆದ ಎರಡು ವಿಧಾನಸಭೆ ಚುನಾವಣೆಗಳಲ್ಲೂ ಸೊನ್ನೆ ಸುತ್ತಿದ್ದ ಕಾಂಗ್ರೆಸ್ ಈ ಬಾರಿಯೂ ಒಂದೂ ಕ್ಷೇತ್ರದಲ್ಲಿ ಗೆಲುವು ಸಾಧಿಸುವ ಲಕ್ಷಣಗಳು ಕಾಣಿಸುತ್ತಿಲ್ಲ.