ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ (Delhi Election Result 2025 ) ಬಿಜೆಪಿ ಈಗಾಗಲೇ ಮ್ಯಾಜಿಕ್ ಸಂಖ್ಯೆ ದಾಟಿ ಭರ್ಜರಿ ಬಹುಮತದತ್ತ ದಾಪುಗಾಲಿಡುತ್ತಿದೆ. ಸದ್ಯದ ಮತ ಎಣಿಕೆಯ ಟ್ರೆಂಡ್ ಪ್ರಕಾರ, ಸತತ 10 ವರ್ಷಗಳ ಕಾಲ ದೆಹಲಿಯನ್ನು ಆಳಿರುವ ಆಮ್ ಆದ್ಮಿ ಪಕ್ಷವು (ಆಪ್) ಧೂಳೀಪಟ ಆಗುತ್ತಿದೆ. ವಿಶೇಷವೆಂದರೆ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಹಾಲಿ ಮುಖ್ಯಮಂತ್ರಿ ಆತಿಷಿ ಮರ್ಲೇನಾ, ಮಾಜಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾರಂತಹ ಆಮ್ ಆದ್ಮಿ ಪಕ್ಷದ ದಿಗ್ಗಜರೇ ಸೋಲಿನತ್ತ ಮುಖ ಮಾಡುತ್ತಿದ್ದಾರೆ.
ಸದ್ಯದ ಮಾಹಿತಿ ಪ್ರಕಾರ, ನವದೆಹಲಿ ಅಸೆಂಬ್ಲಿ ಕ್ಷೇತ್ರದಿಂದ ಸ್ಪರ್ಧಿಸಿರುವ ಕೇಜ್ರಿವಾಲ್ ಅವರು ಹಿನ್ನಡೆ ಅನುಭವಿಸಿದ್ದಾರೆ. ಇಲ್ಲಿ ಕೇಜ್ರಿವಾಲ್ ಪ್ರತಿಸ್ಪರ್ಧಿ, ಬಿಜೆಪಿಯ ಪರ್ವೇಶ್ ವರ್ಮಾ ಅವರು ಮುನ್ನಡೆ ಸಾಧಿಸಿದ್ದಾರೆ. ದೆಹಲಿಯ ಮಾಜಿ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ಅವರು ಜಂಗ್‌ಪುರ ಕ್ಷೇತ್ರದಲ್ಲಿ, ಹಾಗೆಯೇ ಹಾಲಿ ಮುಖ್ಯಮಂತ್ರಿ ಆತಿಷಿ ಸ್ವಕ್ಷೇತ್ರ ಕಲ್ಕಾಜಿಯಲ್ಲಿ ಸೋಲಿನತ್ತ ಸಾಗುತ್ತಿದ್ದಾರೆ. ಕಲ್ಕಾಜಿಯಲ್ಲಿ ಬಿಜೆಪಿಯ ರಮೇಶ್ ಬಿಧೂರಿ ಅವರು ಮುಂದಿದ್ದಾರೆ. ದೆಹಲಿಯ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಗ್ರೇಟರ್ ಕೈಲಾಶ್ ಕ್ಷೇತ್ರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ.
ಇನ್ನೊಂದೆಡೆ, ಆಪ್ ಮತ್ತೊಬ್ಬ ನಾಯಕ ಗೋಪಾಲ್ ರಾಯ್ ಬಾಬರ್ ಪುರ ಕ್ಷೇತ್ರದಲ್ಲಿ, ಹಿರಿಯ ನಾಯಕ ದುರ್ಗೇಶ್ ಪಾಠಕ್ ಅವರು ರಾಜೀಂದರ್ ನಗರ್ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ಎರಡು ಬಾರಿಯ ಆಪ್ ಶಾಸಕ ಅಮಾನತುಲ್ಲಾ ಖಾನ್ ಓಕ್ಲಾ ಕ್ಷೇತ್ರದಲ್ಲಿ ಸೋಲಿನ ಹಾದಿ ಹಿಡಿದಿದ್ದಾರೆ. ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ಸಿಲುಕಿರುವ ಆಪ್ ನಾಯಕ ಸತ್ಯೇದ್ರ ಜೈನ್ ಅವರೂ ಶಕೂರ್ ಬಸ್ತಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುಂದೆ ಮಣಿಯುವ ಸ್ಥಿತಿಗೆ ತಲುಪಿದ್ದಾರೆ.
ಇದನ್ನೂ ಓದಿ: ಚುನಾವಣೆಗೆ ಮುನ್ನವೇ ಆಪ್‌ಗೆ ಶಾಕ್: ಪ್ರಾಸಿಕ್ಯೂಷನ್‌ಗೆ ಕೇಂದ್ರದ ಅನುಮತಿ!
ಚುನಾವಣೆಗೆ ಕೆಲವು ದಿನಗಳಿರುವಂತೆಯೇ ಆಪ್ ಸೇರ್ಪಡೆಯಾಗಿದ್ದ ಐಎಎಸ್ ಪರೀಕ್ಷಾ ಕೋಚ್ ಅವಧ್ ಓಜಾ ಅವರೂ ಪತ್ಪರ್‌ಗಂಜ್ ಕ್ಷೇತ್ರದಲ್ಲಿ ಸೋಲುಣ್ಣುವ ಸಾಧ್ಯತೆ ಹೆಚ್ಚಿದೆ. ಆಪ್‌ನ ಸೋಮನಾಥ್ ಭಾರ್ತಿಯವರೂ ಹಿನ್ನಡೆ ಅನುಭವಿಸಿದ್ದಾರೆ.