ಬೆಂಗಳೂರು: ದೆಹಲಿಯಲ್ಲಿ ಬಿಜೆಪಿ 27 ವರ್ಷದ ಬಳಿಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 70 ಸ್ಥಾನಗಳಲ್ಲಿ ಬಿಜೆಪಿ 48ರಲ್ಲಿ ಗೆದ್ದಿದ್ದರೆ ಆಪ್ 22ಕ್ಕೆ ತೃಪ್ತಿ ಪಟ್ಟಿದೆ. (Delhi Election 2025) ಫಲಿತಾಂಶಗಳ ಬಗ್ಗೆ ನಾನಾ ಪಕ್ಷಗಳು ನಾಯಕರು ಪ್ರತಿಕ್ರಿಯಿಸಿದ್ದಾರೆ. ಅದರ ವಿವರ ಇಲ್ಲಿದೆ.
“ಜನಶಕ್ತಿಯೇ ಪರಮಶಕ್ತಿ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನಾವು ದೆಹಲಿಯ ಸಮಗ್ರ ಅಭಿವೃದ್ಧಿಗಾಗಿ ನೀಡಿದ ಭರವಸೆಯನ್ನು ಪೂರ್ಣಗೊಳಿಸುತ್ತೇ. ಅಲ್ಲಿನ ಜನರ ಜೀವನ ಸುಧಾರಿಸುತ್ತೇವೆ ಎಂಬ ಭರವಸೆ ನೀಡುತ್ತೇವೆ. ದೆಹಲಿ ಅಭಿವೃದ್ಧಿ ದೇಶದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ನಾವು ಈಗ ಹೆಚ್ಚಿನ ಶಕ್ತಿಯೊಂದಿಗೆ ದೆಹಲಿಯ ಜನರ ಸೇವೆ ಮಾಡಲಿದ್ದೇವೆ ” ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿಯ ಹೊಸ ಪರ್ವ: ಅಮಿತ್ ಶಾ
ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ದೆಹಲಿ ಚುನಾವಣಾ ಫಲಿತಾಂಶವನ್ನು ದೇಶ ರಾಜಧಾನಿಯ ಅಭಿವೃದ್ಧಿಯ ಹೊಸ ಪರ್ವ ಎಂದು ಹೊಗಳಿದ್ದಾರೆ. ಸುಳ್ಳು, ಮೋಸ, ಭ್ರಷ್ಟಾಚಾರದ ಆಡಳಿತದ ಅಂತ್ಯ ಎಂದು ನುಡಿದಿದ್ದಾರೆ.
ದೆಹಲಿ ಜನರೊಂದಿಗೆ ಇರುವೆವು: ಕೇಜ್ರಿವಾಲ್
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಸೋಲನ್ನು ಒಪ್ಪಿಕೊಂಡಿದ್ದಾರೆ. ಜನರ ತೀರ್ಪನ್ನು ಗೌರವಿಸುತ್ತೇವೆ ಎಂಬುದಾಗಿಯೂ ನುಡಿದಿದ್ದಾರೆ.
“ನಾವು ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇವೆ ಮತ್ತು ಬಿಜೆಪಿಯ ಈ ಗೆಲುವಿಗೆ ಅಭಿನಂದಿಸುತ್ತೇವೆ. ಅವರು ದೆಹಲಿಯ ಜನರ ನಿರೀಕ್ಷೆಗಳನ್ನು ಈಡೇರಿಸಉವ ಆಶಯವಿದೆ” ಎಂದು ಅವರು ಹೇಳಿದ್ದಾರೆ.
“ಮುಂದಿನ ಐದು ವರ್ಷಗಳಲ್ಲಿ ನಾವು ಅತ್ಯುತ್ತಮ ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸುತ್ತೇವೆ. ದೆಹಲಿಯ ಜನರೊಂದಿಗೆ ಇರುತ್ತೇವೆ. ನಮಗೆ ಅಧಿಕಾರ ಮುಖ್ಯವಲ್ಲ, ಜನಸೇವೆ ಮುಖ್ಯ” ಎಂದು ಅವರು ಹೇಳಿದ್ದಾರೆ.
ಅಭಿವೃದ್ಧಿ ಕಡೆಗೆ ದೆಹಲಿ: ರಾಜನಾಥ್ ಸಿಂಗ್
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯೆ ನೀಡಿ, ದೆಹಲಿಯ ಅಭಿವೃದ್ಧಿ ಭಾರತವನ್ನು ಕಟ್ಟಲು ಅತ್ಯಗತ್ಯ ಎಂದು ಹೇಳಿದ್ದಾರೆ. “ಡಬಲ್ ಎಂಜಿನ್ ಸರ್ಕಾರ ದೆಹಲಿಯ ಅಭಿವೃದ್ಧಿ ಕಾರ್ಯಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ” ಎಂದು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಜನರ ಗೆಲುವು : ಜೆಪಿ ನಡ್ಡಾ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪಕ್ಷದ ಭಾರೀ ಗೆಲುವು ಜನರ ಬೆಂಬಲಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ. “ದೆಹಲಿ ಈಗ ತನ್ನ ಸುಳ್ಳು , ಮೋಸ ಮತ್ತು ಕಪಟಗಳಿಂದ ಮುಕ್ತವಾಗಿದೆ. ಪ್ರಗತಿಯ ಹೊಸ ಯುಗಕ್ಕೆ ಪ್ರವೇಶಿಸಿದೆ” ಎಂದು ಅವರು ಹೇಳಿದ್ದಾರೆ.
ದೆಹಲಿಯ ಪರಿವರ್ತನೆಯಾಗಲಿದೆ: ನಿರ್ಮಲಾ ಸೀತಾರಾಮನ್
ಫಲಿತಾಂಶ ಸಂತೋಷದಾಯಕ. ಮೋದಿ ನೇತೃತ್ವದಲ್ಲಿ ದೆಹಲಿಯ ಜನಸೇವೆಗೆ ಮೊದಲ ಆದ್ಯತೆ ನೀಡುವ ಸರ್ಕಾರ ರಚನೆಗೆ ಬದ್ಧರಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Delhi Election Result 2025 : ಆಪ್ ದಿಗ್ಗಜರಿಗೇ ಸೋಲಿನ ರುಚಿ ಉಣಿಸಿದ ಮತದಾರರು?
ಆಪ್ ವಿರುದ್ಧದ ವಿಜಯ ಎಂದ ಕಾಂಗ್ರೆಸ್
ದೆಹಲಿ ಗೆಲುವು ಬಿಜೆಪಿಯ ಸ್ವಂತ ಗೆಲುವಲ್ಲ. ಆಪ್ ವಿರುದ್ಧದ ಅಸಮಾಧಾನದ ಜನಮತ ಎಂದು ಕಾಂಗ್ರೆಸ್ ಹೇಳಿದೆ. 2015 ಮತ್ತು 2020ರಲ್ಲಿಯೂ ಪ್ರಧಾನಿ ಮೋದಿಯ ಜನಪ್ರಿಯತೆ ಪರಾಕಾಷ್ಠೆಯಲ್ಲಿ ಇದ್ದಾಗಲೂ ಆಪ್ ಭರ್ಜರಿ ಗೆಲುವು ಸಾಧಿಸಿತ್ತು. ಹೀಗಾಗಿ ಇದು ಮೋದಿ ಪರ ಜನರ ಒಪ್ಪಿಗೆ ಅಲ್ಲ ಎಂಬುದಾಗಿ ಹೇಳಬಹುದು ಎಂದು ಕಾಂಗ್ರೆಸ್ ಹೇಳಿದೆ.
ಬದಲಾವಣೆಗಾಗಿ ಮತ : ಪ್ರಿಯಾಂಕಾ ಗಾಂಧಿ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಶನಿವಾರ, ಜನರು ಬದಲಾವಣೆಗೆ ಮತ ಹಾಕಿದ್ದಾರೆ. ಅವರಿಗೆ ಇತರ ಆಯ್ಕೆಗಳು ತೃಪ್ತಿಕರವಾಗಿರಲಿಲ್ಲ ಎಂದು ಹೇಳಿದ್ದಾರೆ.
ಅಣ್ಣಾ ಹಜಾರೆ ಏನಂದ್ರು?
ಹೋರಾಟಗಾರ ಅಣ್ಣಾ ಹಜಾರೆ ಮಾತನಾಡಿ, ಮದ್ಯ ನೀತಿಯಲ್ಲಿನ ಹಣದೊಂದಿಗೆ ಪಕ್ಷವೂ ಮುಳುಗಿತು ಎಂದು ಟೀಕಿಸಿದ್ದಾರೆ.
ಸುಳ್ಳು ಸೋತಿದೆ: ಏಕನಾಥ್ ಶಿಂಧೆ
ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ, ಈ ಗೆಲುವು ಮೋದಿ ಭರವಸೆಗಳ ಮಾಯೆ. ದೆಹಲಿ ಜನರು ಸುಳ್ಳು ತಿರಸ್ಕರಿಸಿದ್ದಾರೆ ಮತ್ತು ಸತ್ಯದೊಂದಿಗೆ ನಿಂತಿದ್ದಾರೆ ಎಂದು ನುಡಿದಿದ್ದಾರೆ.