ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆ (Delhi Election 2025) ಮುಕ್ತಾಯವಾಗಿದ್ದು, ಎಲ್ಲರ ಗಮನವೀಗ ಫೆಬ್ರವರಿ 8ರ ಫಲಿತಾಂಶದ ಮೇಲಿದೆ. ಈಗಾಗಲೇ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದ್ದು, ದಶಕಗಳ ಬಳಿಕ ಬಿಜೆಪಿಯು ದೆಹಲಿ ಗದ್ದುಗೆ ಏರಲಿದೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ, ಚುನಾವಣೆ ಫಲಿತಾಂಶದ ಕುರಿತು ಜ್ಯೋತಿಷ ತಜ್ಞರು ಭವಿಷ್ಯ ನುಡಿದಿದ್ದಾರೆ. ಅದರಲ್ಲೂ, ನರೇಂದ್ರ ಮೋದಿ ಅವರಿಗೆ ಗಜಕೇಸರಿ ಯೋಗ ಇದೆ ಎಂದು ಭವಿಷ್ಯ ನುಡಿದಿದ್ದು, ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಚಾರ್ಯ ಹರಿ ಕೃಷ್ಣ ಶುಕ್ಲಾ ಅವರು ನರೇಂದ್ರ ಮೋದಿ ಹಾಗೂ ಅರವಿಂದ್ ಕೇಜ್ರಿವಾಲ್ ಅವರ ಭವಿಷ್ಯ ನುಡಿದಿದ್ದಾರೆ. ನರೇಂದ್ರ ಮೋದಿ ಅವರ ಜಾತಕದಲ್ಲಿ ವೃಶ್ಚಕ ರಾಶಿಯ ಮಂಗಳ ಹಾಗೂ ಗಜಕೇಸರಿ ಯೋಗವಿದೆ. ಹಾಗಾಗಿ, ನರೇಂದ್ರ ಮೋದಿ ಅವರು ಇನ್ನಷ್ಟು ಪ್ರಬಲವಾಗುವ ಜತೆಗೆ ವಿರೋಧಿಗಳು ದುರ್ಬಲರಾಗುತ್ತಾರೆ ಎಂದು ಜ್ಯೋತಿಷ ಶಾಸ್ತ್ರಜ್ಞರು ತಿಳಿಸಿದ್ದಾರೆ. ಹಾಗಾಗಿ, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮತ್ತೊಂದೆಡೆ, ಅರವಿಂದ್ ಕೇಜ್ರಿವಾಲ್ ಅವರ ಜಾತಕದಲ್ಲಿ ನಕ್ಷತ್ರಗಳ ಚಲನೆ ಇದೆ. ಅಲ್ಲದೆ, ಮಂಗಳ ಮತ್ತು ಸೂರ್ಯ-ಶನಿ ಯೋಗವು ರೂಪ ತಳೆದಿದೆ. ಇದರಿಂದಾಗಿ ಅರವಿಂದ್ ಕೇಜ್ರಿವಾಲ್ ಅವರಿಗೆ ತೊಂದರೆ ಉಂಟಾಗುವ ಸಾಧ್ಯತ ಇದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ದೆಹಲಿ ಚುನಾವಣೆಯಲ್ಲಿ ಆಪ್ ಸೋಲನುಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ದೆಹಲಿ ವಿಧಾನಸಭೆಗೆ ಫೆಬ್ರವರಿ 5ರಂದು ಚುನಾವಣೆ ಮುಗಿದಿದೆ. ಮತಗಟ್ಟೆ ಸಮೀಕ್ಷೆಗಳ ಪ್ರಕಾರ, ಬಿಜೆಪಿಯು ಸರಳ ಬಹುಮತ ಪಡೆಯಲಿದೆ. ಆಡಳಿತಾರೂಢ ಆಪ್ ಪ್ರತಿಪಕ್ಷ ಸ್ಥಾನದಲ್ಲಿ ಕೂರಲಿದೆ ಎಂದು ತಿಳಿದುಬಂದಿದೆ. ಒಟ್ಟಿನಲ್ಲಿ ಫಲಿತಾಂಶ ಕುತೂಹಲ ಕೆರಳಿಸಿದ್ದು, ಫೆಬ್ರವರಿ 8ರಂದೇ ನಿಖರ ಫಲಿತಾಂಶ ದೊರೆಯಲಿದೆ.