ನವದೆಹಲಿ : “ಸಮಾಜದಲ್ಲಿ ಜ್ಞಾನದ ಜ್ಯೋತಿಯನ್ನು ಬೆಳಗಿಸುವುದೇ ಬ್ರಾಹ್ಮಣ ಸಮುದಾಯ” ಎಂದು ದೆಹಲಿ ಸಿಎಂ ರೇಖಾ ಗುಪ್ತಾ ಅವರು ಹೇಳಿದ್ದು, ಈ ಹೇಳಿಕೆಯು ಇದೀಗ ತೀವ್ರ ಚರ್ಚೆ ಹಾಗೂ ವಿವಾದಕ್ಕೆ ಗ್ರಾಸವಾಗಿದೆ.
ದೆಹಲಿಯ ಪಿತಂಪುರದಲ್ಲಿ ಶ್ರೀ ಬ್ರಾಹ್ಮಣ ಸಭಾ ವತಿಯಿಂದ ಆಯೋಜಿಸಲಾಗಿದ್ದ ‘ಅಖಿಲ ಭಾರತ ಬ್ರಾಹ್ಮಣ ಸಮ್ಮೇಳನ’ದಲ್ಲಿ ಮಾತನಾಡಿದ ಅವರು, “ಸಮಾಜದಲ್ಲಿ ಜ್ಞಾನದ ಜ್ಯೋತಿಯನ್ನು ಯಾರಾದರೂ ಬೆಳಗಿಸುತ್ತಿದ್ದರೆ, ಅದು ನಮ್ಮ ಬ್ರಾಹ್ಮಣ ಸಮುದಾಯ. ಅವರು ಕೇವಲ ಶಾಸ್ತ್ರಗಳನ್ನಷ್ಟೇ ಅಲ್ಲ, ಶಸ್ತ್ರಗಳನ್ನೂ ಪೂಜಿಸುತ್ತಾರೆ. ಶಸ್ತ್ರ ಮತ್ತು ಶಾಸ್ತ್ರಗಳ ಮೂಲಕವೇ ಇಂದು ನಾವು ಸಮಾಜ ಮತ್ತು ದೇಶವನ್ನು ರಕ್ಷಿಸಲು ಸಾಧ್ಯ,” ಎಂದು ಹೇಳಿದರು.

ಅಲ್ಲದೇ ಪ್ರತಿಯೊಂದು ಸರ್ಕಾರವೂ ಈ ಸಮುದಾಯದ ಕಲ್ಯಾಣಕ್ಕಾಗಿ ಶ್ರಮಿಸಬೇಕು ಎಂದೂ ಅವರು ಕರೆ ನೀಡಿದರು. “ಜ್ಞಾನದ ಜ್ಯೋತಿಯನ್ನು ಬೆಳಗಿಸುವ ಮೂಲಕ, ಧರ್ಮವನ್ನು ಪ್ರಚಾರ ಮಾಡುವ ಮೂಲಕ ಮತ್ತು ಸದ್ಭಾವನೆಯ ಮನೋಭಾವವನ್ನು ಬೆಳೆಸುವ ಮೂಲಕ ಬ್ರಾಹ್ಮಣ ಸಮುದಾಯವು ಯಾವಾಗಲೂ ಸಮಾಜದ ಒಳಿತಿಗಾಗಿ ಕೆಲಸ ಮಾಡಿದೆ. ಯಾವುದೇ ಸರ್ಕಾರ ಅಧಿಕಾರದಲ್ಲಿರಲಿ, ಬ್ರಾಹ್ಮಣ ಸಮುದಾಯವನ್ನು ಮುಂದೆ ಕೊಂಡೊಯ್ಯಲು ಅವರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು,” ಎಂದು ರೇಖಾ ಗುಪ್ತಾ ಪ್ರತಿಪಾದಿಸಿದರು.
ದೆಹಲಿಯ ಹಿಂದಿನ ಸರ್ಕಾರಗಳನ್ನು ಗುರಿಯಾಗಿಸಿ ಮಾತನಾಡಿದ ಅವರು, “ಕಳೆದ 27 ವರ್ಷಗಳಿಂದ ದೆಹಲಿ ನಿಧಾನಗತಿಯಲ್ಲಿ ಸಾಗುತ್ತಿದೆ. ಈಗ ಗೇರ್ ಬದಲಾಯಿಸಿ ಪ್ರಕ್ರಿಯೆಯನ್ನು ವೇಗಗೊಳಿಸುವ ಸಮಯ ಬಂದಿದೆ. ನಮ್ಮ ಸುತ್ತಮುತ್ತಲಿನ ರಾಜ್ಯಗಳು ನಮ್ಮನ್ನು ಮೀರಿ ಸಾಗಿವೆ. ನಾವೆಲ್ಲರೂ ದೆಹಲಿ ಮತ್ತು ಅದರ ಜನರ ಹಿತದೃಷ್ಟಿಯಿಂದ ಒಟ್ಟಾಗಿ ಕೆಲಸ ಮಾಡಿದರೆ, ದೆಹಲಿಯು ಖಂಡಿತವಾಗಿಯೂ ‘ವಿಕಸಿತ್ ದೆಹಲಿ’ಯಾಗಿ ಹೊರಹೊಮ್ಮಲಿದೆ,” ಎಂದರು.
ತಮ್ಮ ಸರ್ಕಾರವು ಪ್ರತಿಯೊಂದು ಸಮುದಾಯಕ್ಕೂ ಸಮಾನ ಅವಕಾಶಗಳನ್ನು ಒದಗಿಸುವ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಗೌರವಿಸುವ ಗುರಿ ಹೊಂದಿದೆ ಎಂದು ತಿಳಿಸಿದ ಅವರು, “ಒಂದು ಒಗ್ಗಟ್ಟಿನ ಸಮಾಜ ಮಾತ್ರ ನಿಜವಾದ ಪ್ರಗತಿಯನ್ನು ಸಾಧಿಸಲು ಸಾಧ್ಯ,” ಎಂದು ಅಭಿಪ್ರಾಯಪಟ್ಟರು.