ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಅಭೂತಪೂರ್ವ ಗೆಲುವು ಸಾಧಿಸಿದ್ದು, 27 ವರ್ಷಗಳ ಬಳಿಕ ಅಧಿಕಾರದ ಗದ್ದುಗೆ ಹಿಡಿದಿದೆ. ಇನ್ನು, ಪ್ರತಿ ಪಕ್ಷ ಆಮ್ ಆದ್ಮಿ ಪಕ್ಷವು, ಬಿಜೆಪಿಯು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ ಯೋಜನೆಗಳನ್ನು, ಉಚಿತ ಕೊಡುಗೆಗಳನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸುತ್ತಿದೆ. ಇದರ ಬೆನ್ನಲ್ಲೇ, ದೆಹಲಿ ಸಿಎಂ ರೇಖಾ ಗುಪ್ತಾ (Rekha Gupta) ಅವರು ಈ ಕುರಿತು ಮಾತನಾಡಿದ್ದು, “ಬಿಜೆಪಿಯು ಎಲ್ಲ ಭರವಸೆಗಳನ್ನು ಈಡೇರಿಸುತ್ತದೆ” ಎಂದು ಹೇಳಿದ್ದಾರೆ.
“ಚುನಾವಣೆಗೂ ಮೊದಲು ಬಿಜೆಪಿಯ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗುತ್ತದೆ. ಸುಖಾಸುಮ್ಮನೆ ಆಮ್ ಆದ್ಮಿ ಪಕ್ಷವು ಜನರಲ್ಲಿ ಗೊಂದಲ ಮೂಡಿಸುತ್ತಿದೆ. ಪಂಜಾಬ್ ನಲ್ಲಿ ಸ್ವತಃ ಆಪ್ ನೀಡಿದ ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಸರ್ಕಾರ ರಚನೆಯಾಗುವ ಮೊದಲೇ ದೆಹಲಿಯಲ್ಲಿ ಆಪ್ ನಾಯಕರು ಪ್ರತಿಭಟನೆ ನಡೆಸಿದ್ದರು. ನಾವು ಎಲ್ಲ ಘೋಷಣೆಗಳನ್ನು ಜಾರಿಗೆ ತರುವುದು ನಿಶ್ಚಿತ. ಈ ವಿಷಯದಲ್ಲಿ ಆಪ್ ಅನಗತ್ಯ ಗೊಂದಲ ಸೃಷ್ಟಿಸುವುದು ಬೇಡ” ಎಂದಿದ್ದಾರೆ.
27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಹಿಡಿದಿರುವ ಬಿಜೆಪಿಗೆ ಎಲ್ಲ ಭರವಸೆಗಳನ್ನು ಈಡೇರಿಸುವ ಜತೆಗೆ ಕಾನೂನು ಸುವ್ಯವಸ್ಥೆ ಕಾಪಾಡುವುದು, ವಾಯುಮಾಲಿನ್ಯ ನಿಯಂತ್ರಣ, ಯಮುನಾ ನದಿ ಸ್ವಚ್ಛಗೊಳಿಸುವುದು ಸೇರಿ ಹಲವು ಸವಾಲುಗಳು ಎದುರಾಗಿವೆ.
ಬಿಜೆಪಿ ನೀಡಿದ ಭರವಸೆಗಳು ಏನೇನು?
- ಬಡ ಮಹಿಳೆಯರಿಗೆ ಮಾಸಿಕ 2,500 ರೂಪಾಯಿ ಸಹಾಯಧನ
- ಗರ್ಭಿಣಿಯರಿಗೆ ಒಂದೇ ಬಾರಿಗೆ 21 ಸಾವಿರ ರೂಪಾಯಿ ನೆರವು
- ಕೇವಲ 500 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್ ಪೂರೈಕೆ
- 60 ವರ್ಷ ದಾಟಿದ ಹಿರಿಯ ನಾಗರಿಕರಿಗೆ ಮಾಸಿಕ 2,500 ರೂಪಾಯಿ ಜಮೆ
- 70 ವರ್ಷ ದಾಟಿದವರಿಗೆ ಮಾಸಿಕ 3 ಸಾವಿರ ರೂಪಾಯಿ ಸಹಾಯಧನ
- ಬಡ ಮಕ್ಕಳಿಗೆ ಎಲ್ ಕೆಜಿಯಿಂದ ಪಿಜಿವರೆಗೆ ಉಚಿತ ಶಿಕ್ಷಣ