ದೆಹಲಿ ಮದ್ಯನೀತಿ ಹಗರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿರುವ ಸಿಎಂ ಅರವಿಂದ್ ಕೇಜ್ರಿವಾಲ್(Arvind Kejriwal)ಗೆ ಸುಪ್ರೀಂಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಈ ಮೂಲಕ ಬರೋಬ್ಬರಿ 156 ದಿನಗಳ ನಂತರ ಸಿಎಂ ಕೇಜ್ರಿವಾಲ್ ಗೆ ಸುಪ್ರೀಂ ಕೋರ್ಟ್ ನಿಂದ ಜಾಮೀನು ಸಿಕ್ಕಂತಾಗಿದೆ. ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರ ಪೀಠ ಈ ತೀರ್ಪು ಪ್ರಕಟಿಸಿದೆ.
ಮಾರ್ಚ್ 21 ರಂದು ಕೇಜ್ರಿವಾಲ್ ರನ್ನು ಇಡಿ ಬಂಧಿಸಿತ್ತು. 10 ದಿನಗಳ ವಿಚಾರಣೆಯ ನಂತರ ಅವರನ್ನು ಏಪ್ರಿಲ್ 1 ರಂದು ತಿಹಾರ್ ಜೈಲಿಗೆ ಹಾಕಲಾಗಿತ್ತು. ಆನಂತರ ಚುನಾವಣೆಯ ಹಿನ್ನೆಲೆಯಲ್ಲಿ 21 ದಿನಗಳ ಕಾಲ ಬಿಡುಗಡೆ ಮಾಡಲಾಗಿತ್ತು. ಈ ಮೂಲಕ 156 ದಿನಗಳ ಕಾಲ ಜೈಲಿನಲ್ಲಿದ್ದರು. ಕೇಜ್ರಿವಾಲ್ ಹಲವಾರು ದಿನಗಳಿಂದ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತ ಇದ್ದರು.
ಈಗ ರದ್ದಾದ ದೆಹಲಿ ಅಬಕಾರಿ ನೀತಿ 2021-22 ರಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅರೆಸ್ಟ್ ಆಗಿದ್ದರು. ಜೂನ್ 26 ರಂದು ಅಬಕಾರಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿದ್ದಾಗ ಸಿಬಿಐ ಬಂಧಿಸಿತ್ತು.
ಅಬಕಾರಿ ನೀತಿಯನ್ನು ಅಂತಿಮಗೊಳಿಸಲು ಕೇಜ್ರಿವಾಲ್ ನೇತೃತ್ವದ ಎಎಪಿ 100 ಕೋಟಿಗಳಷ್ಟು ಕಿಕ್ ಬ್ಯಾಕ್ ಪಡೆದಿದೆ. ಈ ಹಣದ ದೊಡ್ಡ ಭಾಗವನ್ನು ಪಕ್ಷವು ತನ್ನ ಗೋವಾ ಚುನಾವಣಾ ಪ್ರಚಾರದಲ್ಲಿ ಬಳಸಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.