ನವದೆಹಲಿ: ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟದ ಹಿಂದಿನ ಸಂಚು ಕೇವಲ ಆಕಸ್ಮಿಕವಲ್ಲ, ಅದು ಎರಡು ವರ್ಷಗಳ ಸುದೀರ್ಘ ತಯಾರಿ ಎಂದು ಬಂಧಿತ ಆರೋಪಿ ಡಾ. ಮುಜಮ್ಮಿಲ್ ಶಕೀಲ್ ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. “ದೆಹಲಿ ಸ್ಫೋಟ” ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ಈ ಕುರಿತು ಸ್ಫೋಟಕ ಮಾಹಿತಿಗಳನ್ನು ಬಹಿರಂಗಪಡಿಸಿದೆ.
ಆತ್ಮಾಹುತಿ ಬಾಂಬರ್ ಉಮರ್ ಮೊಹಮ್ಮದ್‌ನ ಆಪ್ತ ಸಹಚರನಾಗಿರುವ ಡಾ. ಮುಜಮ್ಮಿಲ್ ಶಕೀಲ್ ವಿಚಾರಣೆ ವೇಳೆ ಆಘಾತಕಾರಿ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. “ನಾವು ಕಳೆದ ಎರಡು ವರ್ಷಗಳಿಂದ (2023 ರಿಂದ) ಈ ದಾಳಿಗೆ ತಯಾರಿ ನಡೆಸುತ್ತಿದ್ದೆವು. ಸ್ಫೋಟಕಗಳು, ರಿಮೋಟ್‌ಗಳು ಮತ್ತು ಬಾಂಬ್ ತಯಾರಿಕೆಗೆ ಬೇಕಾದ ಇತರೆ ವಸ್ತುಗಳನ್ನು ಸಂಗ್ರಹಿಸುತ್ತಿದ್ದೆವು,” ಎಂದು ಆತ ಒಪ್ಪಿಕೊಂಡಿದ್ದಾನೆ.
ಸ್ಫೋಟಕಗಳ ಸಂಗ್ರಹ ಹೇಗೆ?
ವೈದ್ಯನಾಗಿದ್ದ ಮುಜಮ್ಮಿಲ್‌ಗೆ ಯೂರಿಯಾ ಮತ್ತು ಅಮೋನಿಯಂ ನೈಟ್ರೇಟ್ (ಒಂದು ಪ್ರಬಲ ಸ್ಫೋಟಕ ರಾಸಾಯನಿಕ) ಖರೀದಿಸುವ ಜವಾಬ್ದಾರಿ ನೀಡಲಾಗಿತ್ತು. ಆತ ಹರ್ಯಾಣದ ಗುರುಗ್ರಾಮ ಮತ್ತು ನುಹ್‌ನಿಂದ ಬರೋಬ್ಬರಿ 26 ಕ್ವಿಂಟಾಲ್ ಎನ್‌ಪಿಕೆ ರಸಗೊಬ್ಬರವನ್ನು 3 ಲಕ್ಷ ರೂ.ಗೆ ಖರೀದಿಸಿದ್ದ. ಈ ರಾಸಾಯನಿಕಗಳನ್ನು ಸುರಕ್ಷಿತವಾಗಿಡಲು ಫರೀದಾಬಾದ್‌ನಲ್ಲಿ ಡೀಪ್ ಫ್ರೀಜರ್ ಕೂಡ ಖರೀದಿಸಲಾಗಿತ್ತು. ಸಹಚರ ಉಮರ್ ರಸಗೊಬ್ಬರವನ್ನು ಸಂಸ್ಕರಿಸಿ ಸ್ಫೋಟಕವಾಗಿ ಬದಲಿಸುವ ಕೆಲಸ ಮಾಡುತ್ತಿದ್ದನು.
ಭಯೋತ್ಪಾದಕರೇ “ಹಣದ ಮೂಲ”
ಈ ಭಯೋತ್ಪಾದಕ ಕೃತ್ಯಕ್ಕೆ ಹೊರಗಿನಿಂದ ಹಣ ಬಂದಿಲ್ಲ, ಬದಲಿಗೆ ಆರೋಪಿಗಳೇ ಸ್ವಂತ ಹಣ ಹೂಡಿಕೆ ಮಾಡಿದ್ದರು. ಒಟ್ಟು 26 ಲಕ್ಷ ರೂ. ನಗದು ಸಂಗ್ರಹಿಸಲಾಗಿತ್ತು.
ಆತ್ಮಾಹುತಿ ಬಾಂಬರ್ ಉಮರ್: 2 ಲಕ್ಷ ರೂ.
ಮುಜಮ್ಮಿಲ್ ಶಕೀಲ್: 5 ಲಕ್ಷ ರೂ.
ಆದಿಲ್ ರಾಥರ್: 8 ಲಕ್ಷ ರೂ.
ಮುಜಫರ್ ರಾಥರ್: 6 ಲಕ್ಷ ರೂ.
ಶಹೀನ್ ಸಯೀದ್ (ಲಕ್ನೋ): 5 ಲಕ್ಷ ರೂ.
ಹಣದ ವಿಚಾರವಾಗಿ ಉಮರ್ ಮತ್ತು ಮುಜಮ್ಮಿಲ್ ನಡುವೆ ಜಗಳ ನಡೆದಿದ್ದು, ನಂತರ ಉಮರ್ ತನ್ನ ‘ರೆಡ್ ಇಕೋ ಸ್ಪೋರ್ಟ್’ ಕಾರನ್ನು ಮುಜಮ್ಮಿಲ್‌ಗೆ ನೀಡಿದ್ದ.
ಎಕೆ-47 ಖರೀದಿ ಮತ್ತು ಟರ್ಕಿ ಪ್ರಯಾಣ
ಮುಜಮ್ಮಿಲ್ 6.5 ಲಕ್ಷ ರೂ. ಕೊಟ್ಟು ಎಕೆ-47 ರೈಫಲ್ ಖರೀದಿಸಿದ್ದನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೆ, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ನಂಟು ಹೊಂದಿರುವ ಒಕಾಸಾ ಎಂಬವನ ಸೂಚನೆಯಂತೆ ಮುಜಮ್ಮಿಲ್ ಮತ್ತು ಇತರರು ಟರ್ಕಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿಂದ ಅಫ್ಘಾನಿಸ್ತಾನಕ್ಕೆ ಹೋಗುವ ಯೋಜನೆ ಇತ್ತಾದರೂ, ಹ್ಯಾಂಡ್ಲರ್ ಹಿಂದೆ ಸರಿದಿದ್ದರಿಂದ ಅದು ಕೈಗೂಡಲಿಲ್ಲ. ಉಮರ್ ಇಂಟರ್ನೆಟ್‌ನಲ್ಲಿ ಬಾಂಬ್ ತಯಾರಿಸುವ ವಿಡಿಯೋಗಳನ್ನು ನೋಡಿ ಕಲಿಯುತ್ತಿದ್ದನು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಕೆಂಪು ಕೋಟೆಯ ಬಳಿ ನಡೆದ ಈ ಸ್ಫೋಟದಲ್ಲಿ 13 ಮಂದಿ ಪ್ರಾಣ ಕಳೆದುಕೊಂಡಿದ್ದು, ಇದು ಕೇವಲ ಆರಂಭವಾಗಿತ್ತು. ದೇಶದ ಹಲವು ನಗರಗಳಲ್ಲಿ ಸರಣಿ ಸ್ಫೋಟ ನಡೆಸುವ ಸಂಚು ಇತ್ತು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಈ “ವೈಟ್ ಕಾಲರ್” (ಉನ್ನತ ಶಿಕ್ಷಣ ಪಡೆದವರ) ಭಯೋತ್ಪಾದಕ ಜಾಲದ ಆಳ-ಅಗಲವನ್ನು ಭೇದಿಸಲು ಎನ್‌ಐಎ ತೀವ್ರ ಶೋಧ ನಡೆಸುತ್ತಿದೆ.
ಇದನ್ನೂ ಓದಿ: ಯೂಟ್ಯೂಬ್‌ನಲ್ಲಿ ಮಗನ ಸಾಹಸದ ವಿಡಿಯೋ ಸ್ಕ್ರೋಲ್ ಮಾಡುತ್ತಿದ್ದ ತಂದೆಗೆ ಸಿಕ್ಕಿದ್ದು ತೇಜಸ್ ಪತನಗೊಂಡ ವಿಡಿಯೋ!



















