ನವದೆಹಲಿ : ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಸಮೀಪ ಸೋಮವಾರ ಸಂಜೆ ನಡೆದ ಭಾರಿ ಕಾರು ಸ್ಫೋಟದ ನಂತರ ಎಲ್ಲರ ಗಮನ ನಗರದ ಎಲ್‌ಎನ್‌ಜೆಪಿ ಆಸ್ಪತ್ರೆಯತ್ತ ನೆಟ್ಟಿತ್ತು. ತಮ್ಮವರ ಮೃತದೇಹಗಳ ಬಗ್ಗೆ ವಿಚಾರಿಸಲು ನೊಂದ ಸಂಬಂಧಿಕರು ನಿನ್ನೆ (ಮಂಗಳವಾರ) ಆಸ್ಪತ್ರೆಯ ಆವರಣದಲ್ಲಿ ಸೇರಿದ್ದರು. ಉಮ್ಮಳಿಸಿ ಬರುತ್ತಿದ್ದ ಕಣ್ಣೀರುರೊರೆಸುತ್ತಾ ಮೃತದೇಹಗಳನ್ನು ಗುರುತಿಸಲು ಅವರು ಗೋಳಾಡುತ್ತಿದ್ದರು.

ಸ್ಫೋಟದಲ್ಲಿ ಈವರೆಗೆ 12 ಮಂದಿ ಪ್ರಾಣ ಕಳೆದುಕೊಂಡಿದ್ದಾಗಿ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ ಪೈಕಿ ಎಂಟು ಜನರನ್ನು ಗುರುತಿಸಲಾಗಿದೆ. ಉಳಿದವರ ದೇಹಗಳು ಗುರುತಿಸಲಾಗದಷ್ಟು ಛಿದ್ರಗೊಂಡಿವೆ. ವಿಧಿವಿಜ್ಞಾನ ತಜ್ಞರು ಮತ್ತು ತನಿಖಾಧಿಕಾರಿಗಳು ಡಿಎನ್‌ಎ ಮಾದರಿಗಳ ಮೂಲಕ ದೀರ್ಘ ವೈದ್ಯಕೀಯ ಹಾಗು ಕಾನೂನು ಗುರುತಿನ ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.
ಮೊದಲು ಗುರುತಿಸಲಾದ ಶವಗಳಲ್ಲಿ ಒಂದು ದೆಹಲಿ ಸಾರಿಗೆ ನಿಗಮ (ಡಿಟಿಸಿ) ಬಸ್ ಕಂಡಕ್ಟರ್ ಅಶೋಕ್ ಕುಮಾರ್(34) ಅವರದು. ಇವರು ಕೆಲಸ ಮುಗಿಸಿ ನಗರದ ಜಗತ್‌ಪುರಿಯಲ್ಲಿರುವ ಬಾಡಿಗೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ತಮ್ಮದೇ ಊರಿನ ಉತ್ತರ ಪ್ರದೇಶದ ಅಮ್ರೋಹಾದವರಾದ ಸ್ನೇಹಿತ, ರಸಗೊಬ್ಬರ ವ್ಯಾಪಾರಿ ಲೋಕೇಶ್ ಅಗರ್‌ವಾಲ್ ಅವರನ್ನು ಭೇಟಿ ಮಾಡಿ ಇಬ್ಬರೂ ಒಟ್ಟಿಗೆ ಹೋಗುತ್ತಿದ್ದರು. ಆದರೆ, ಸ್ಫೋಟದಲ್ಲಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಅಶೋಕ್‌ರ ಪತ್ನಿ, ಏಳು ಮತ್ತು ಒಂಬತ್ತು ವರ್ಷದ ಇಬ್ಬರು ಹೆಣ್ಣುಮಕ್ಕಳು ಮತ್ತು ಆರು ವರ್ಷದ ಮಗ ಬದುಕುಳಿದಿದ್ದಾರೆ ಎಂದು ಅವರ ಅತ್ತಿಗೆ ಸುಮತಿ ಎಂಬವರು ಮಾಹಿತಿ ನೀಡಿದ್ದಾರೆ. ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ದಾಖಲಾಗಿರುವ ತಮ್ಮ ಸಂಬಂಧಿಯನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಲೋಕೇಶ್ ಅವರ ಸಂಬಂಧಿಕರು, ಮೊಬೈಲ್ ಫೋನ್‌ನಲ್ಲಿ ಕೊನೆಯದಾಗಿ ಡಯಲ್ ಮಾಡಲಾದ ಸಂಖ್ಯೆಯಿಂದ ಬಂದ ಕರೆಯ ನಂತರ ಅವರ ಸಾವಿನ ಸುದ್ದಿ ತಿಳಿದುಕೊಂಡಿದ್ದಾರೆ. ಇದನ್ನು ದೆಹಲಿ ಪೊಲೀಸರು ಪತ್ತೆ ಮಾಡಿದ್ದಾರೆ.

ಸೋಮವಾರ ಸಾವನ್ನಪ್ಪಿದ ಮತ್ತೊಬ್ಬರು ಉತ್ತರ ಪ್ರದೇಶದ ವ್ಯಕ್ತಿ ದಿನೇಶ್ ಮಿಶ್ರಾ. ಇವರು ಸುಮಾರು 12 ವರ್ಷಗಳಿಂದ ದೆಹಲಿಯಲ್ಲಿ ವಾಸಿಸುತ್ತಿದ್ದರು. ಚಾವರಿ ಬಜಾರ್‌ನ ಕಾರ್ಡ್ ಅಂಗಡಿಯಲ್ಲಿ ಇವರ ಕೆಲಸ. ಪತ್ನಿ ರೀನಾ, ಇಬ್ಬರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗ ಬದುಕುಳಿದಿದ್ದಾರೆ. ಇವರ ಕುಟುಂಬವು ಮೃತದೇಹವನ್ನು ಉತ್ತರ ಪ್ರದೇಶದ ಶ್ರಾವಸ್ತಿಯ ಇಕೌನಾ ಪೊಲೀಸ್ ಠಾಣಾ ವ್ಯಾಪ್ತಿಯ ಅವರ ಸ್ವಗ್ರಾಮ ಚಿಕ್ನಿ ಪೂರ್ವ ಗಣೇಶ್ ಪುರ್‌ಗೆ ತೆಗೆದುಕೊಂಡು ಹೋಗಿದ್ದಾರೆ. ದೆಹಲಿಯಲ್ಲೇ ವಾಸಿಸುವ ಮತ್ತು ಕೆಲಸ ಮಾಡುತ್ತಿರುವ ದಿನೇಶ್ ಅವರ ಸಹೋದರನಿಂದ ಅವರಿಗೆ ಘಟನೆಯ ಬಗ್ಗೆ ಗೊತ್ತಾಗಿತ್ತು.
ಮೃತಪಟ್ಟವರಲ್ಲಿ ಶಾಸ್ತ್ರಿ ಪಾರ್ಕ್‌ನ 35 ವರ್ಷದ ಬ್ಯಾಟರಿ ಚಾಲಿತ ರಿಕ್ಷಾ (ಇ-ರಿಕ್ಷಾ) ಚಾಲಕ ಜುಮ್ಮನ್ ಕೂಡ ಸೇರಿದ್ದಾರೆ. ಸ್ಫೋಟಕ್ಕೆ ಸ್ವಲ್ಪ ಮೊದಲು ಚಾಂದನಿ ಚೌಕ್‌ನಲ್ಲಿರುವ ತಮ್ಮ ಸಾಮಾನ್ಯ ಪಿಕಪ್ ಮತ್ತು ಡ್ರಾಪ್ ಸೈಟ್‌ನಲ್ಲಿ ಇವರನ್ನು ಬಿಡಲಾಗಿತ್ತು ಎಂದು ಅವರ ಚಿಕ್ಕಪ್ಪ ಮೊಹಮ್ಮದ್ ಇದ್ರಿಸ್ ಈಟಿವಿ ಭಾರತ್‌ಗೆ ತಿಳಿಸಿದರು. ಸಂಜೆ ಅವರು ಪ್ರತಿದಿನ ಹೋಗುತ್ತಿದ್ದ ಕೆಂಪುಕೋಟೆಯ ಅದೇ ಸ್ಥಳಕ್ಕೆ ಹೋಗಿದ್ದರು. ಕೆಂಪು ಕೋಟೆಯ ಬಳಿ ಅವರನ್ನು ಕೊನೆಯದಾಗಿ ಮಾತನಾಡಿದ್ದೆವು. ನಂತರ, ನಾವು ಅವರೊಂದಿಗಿನ ಎಲ್ಲ ಸಂಪರ್ಕವನ್ನೂ ಕಳೆದುಕೊಂಡೆವು ಎಂದು ಇದ್ರಿಸ್ ಹೇಳಿದರು.
ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡ ಮತ್ತೊಬ್ಬ ಕ್ಯಾಬ್ ಚಾಲಕ ಬಿಹಾರದ ಪಂಕಜ್ ಸೈನಿ (22). ಮೂಲತಃ ಬಿಹಾರದವರಾದ ಇವರು, ಚಾಂದನಿ ಚೌಕ್‌ನಲ್ಲಿ ಒಬ್ಬ ಪ್ರಯಾಣಿಕನನ್ನು ಆಗಷ್ಟೇ ಇಳಿಸಿದ್ದರು. ಇದೇ ವೇಳೆ ಸ್ಫೋಟ ಸಂಭವಿಸಿತ್ತು.
ದಕ್ಷಿಣ ದೆಹಲಿಯ ಶ್ರೀನಿವಾಸಪುರಿಯ 34 ವರ್ಷದ ಅಮರ್ ಕಟಾರಿಯಾ ಕೂಡ ಮೃತರಲ್ಲಿ ಒಬ್ಬರು. ಇವರು ಚಾಂದನಿ ಚೌಕ್‌ನಿಂದ ಔಷಧ ವ್ಯವಹಾರ ನಡೆಸುತ್ತಿದ್ದರು. ತೋಳುಗಳ ಮೇಲೆ ತಮ್ಮ ಪೋಷಕರು ಮತ್ತು ಪತ್ನಿಗಾಗಿ ಹಾಕಿಕೊಂಡಿದ್ದ ಹಚ್ಚೆಯ ಮೂಲಕ ಇವರ ಕುಟುಂಬ ಮೃತದೇಹವನ್ನು ಗುರುತಿಸಿದೆ. ಇದಕ್ಕೂ ಮುನ್ನ, ಮೃತದೇಹವನ್ನು ಗುರುತಿಸಲು ಆಸ್ಪತ್ರೆ ಸಿಬ್ಬಂದಿ ಕುಟುಂಬಕ್ಕೆ ಅವಕಾಶ ನೀಡುವವರೆಗೂ ಅವರು ರಾತ್ರಿಯಿಡೀ ಕಾಯುತ್ತಿದ್ದರು. ಅಮರ್ ಕುತ್ತಿಗೆಯ ಹಿಂಭಾಗದಲ್ಲಿ ಆಳವಾದ ಗಾಯವೊಂದನ್ನು ಹೊರತುಪಡಿಸಿ, ದೇಹದ ಮೇಲೆ ಯಾವುದೇ ಇತರೆ ಗಾಯಗಳಿಲ್ಲ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಬೈಕಿಂಗ್ ಉತ್ಸಾಹಿಯೂ ಆಗಿರುವ ಅಮರ್, ಪತ್ನಿ ಮತ್ತು ಮೂರು ವರ್ಷದ ಮಗನನ್ನು ಅಗಲಿದ್ದಾರೆ.
ಅಪರಿಚಿತ ಮೃತದೇಹಗಳ ಗುರುತು ಪತ್ತೆ ಹೇಗೆ?: ಇನ್ನೂ ನಾಲ್ಕು ಶವಗಳನ್ನು ಗುರುತಿಸಬೇಕಾಗಿದೆ. ಮೃತರ ಗುರುತು ಪತ್ತೆ ಹಾಗು ಅನುಸರಿಸಬೇಕಾದ ವೈದ್ಯಕೀಯ ಹಾಗು ಕಾನೂನು ಶಿಷ್ಟಾಚಾರದ ಬಗ್ಗೆ ಈಟಿವಿ ಭಾರತ್ ಏಷ್ಯನ್ ಸೊಸೈಟಿ ಫಾರ್ ಎಮರ್ಜೆನ್ಸಿ ಮೆಡಿಸಿನ್‌ನ ಮಾಜಿ ಅಧ್ಯಕ್ಷ ಡಾ.ತಮೋರಿಶ್ ಕೋಲೆ ಅವರನ್ನು ಸಂಪರ್ಕಿಸಿದಾಗ, ಇದಕ್ಕಾಗಿ ವಿವರವಾದ ಆಂಥ್ರೊಪೊಮೆಟ್ರಿಕ್ ಅಳತೆಗಳು (ಎತ್ತರ, ತೂಕ, ದೇಹದ ರಚನೆ), ದಂತಗಳ ಪಟ್ಟಿ, ಅಸ್ಥಿಪಂಜರದ ಅಸಹಜತೆಗಳು, ಹಳೆಯ ಶಸ್ತ್ರಚಿಕಿತ್ಸಾ ಗುರುತುಗಳು, ದಾಖಲಿಸಲು ಶವಪರೀಕ್ಷೆ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ : ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಬಾಲಿವುಡ್ ನಟ ಗೋವಿಂದ.. ಆಸ್ಪತ್ರೆಗೆ ದಾಖಲು!



















