ನವದೆಹಲಿ: ನವರಾತ್ರಿಯ(Navratri) ಸಮಯದಲ್ಲಿ ದೆಹಲಿಯಾದ್ಯಂತ ಮಟನ್ ಅಂಗಡಿಗಳನ್ನು ಮುಚ್ಚಬೇಕು ಎಂದು ದಿಲ್ಲಿಯ ಬಿಜೆಪಿ ಶಾಸಕರಾದ ರವೀಂದರ್ ನೇಗಿ ಮತ್ತು ನೀರಜ್ ಬಸೋಯಾ ಅವರು ಆಗ್ರಹಿಸಿದ್ದಾರೆ. ಮಟನ್ ಮಾರಾಟವು ಹಿಂದೂಗಳ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಕಾರಣ, ಮಟನ್ ಅಂಗಡಿಗಳನ್ನು ಮುಚ್ಚುವ ಆದೇಶ ಹೊರಡಿಸಬೇಕು ಎಂದೂ ಅವರು ಹೇಳಿದ್ದಾರೆ.
“ನವರಾತ್ರಿಯ ಸಮಯದಲ್ಲಿ, ದೇವಾಲಯಗಳ ಮುಂದೆಯೂ ಮಾಂಸದ ಅಂಗಡಿಗಳನ್ನು ತೆರೆದಿರಲಾಗುತ್ತದೆ. ಇದು ಹಿಂದೂಗಳ ಹಬ್ಬ. ಹಬ್ಬದ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ನೋಡುವುದು ನಮ್ಮ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತದೆ. ಹಿಂದೂಗಳ ಭಾವನೆಗಳಿಗೆ ಎಲ್ಲರೂ ಗೌರವ ಕೊಡಬೇಕು. ಸಿಹಿಯಾದ ಈದ್ ಹಬ್ಬದ ದಿನ ಜನರು ಶ್ಯಾವಿಗೆ ಪಾಯಸ (ಸೇವಿಯಾನ್) ನಾಡಿ ತಿನ್ನಲಿ, ಮೇಕೆಯನ್ನು ಕೊಲ್ಲುವ ಅಗತ್ಯವಿಲ್ಲ” ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿಯಾದ್ಯಂತ ಈ ನಿರ್ದೇಶನವನ್ನು ಜಾರಿಗೆ ತರಲು ಸಾಧ್ಯವಾಗದಿದ್ದರೂ, ನಾನು ನನ್ನ ಪತ್ಪರ್ ಗಂಜ್ ಕ್ಷೇತ್ರದಲ್ಲಿ ಮಟನ್ ಅಂಗಡಿಗಳು ಕಾರ್ಯನಿರ್ವಹಿಸದಂತೆ ನೋಡಿಕೊಳ್ಳುತ್ತೇನೆ ಎಂದು ನೇಗಿ ಹೇಳಿದ್ದಾರೆ. ತಾವು ಮುನ್ಸಿಪಲ್ ಕಾರ್ಪೊರೇಟರ್ ಆಗಿದ್ದ ಅವಧಿಯಲ್ಲೂ ಈ ವಾದವನ್ನು ಮುಂದಿಟ್ಟಿದ್ದೆ ಎಂದೂ ಅವರು ಹೇಳಿದ್ದಾರೆ.

ಮತ್ತೊಬ್ಬ ಬಿಜೆಪಿ ಶಾಸಕ ನೀರಜ್ ಬಸೋಯಾ ಕೂಡ ಇದೇ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. “ನವರಾತ್ರಿಯ ಸಮಯದಲ್ಲಿ ಮಾಂಸದ ಅಂಗಡಿಗಳನ್ನು ಮುಚ್ಚಬೇಕು. ಈ ಮಾಂಸದ ಅಂಗಡಿಗಳು ವಸತಿ ಪ್ರದೇಶಗಳಲ್ಲಿರಬಾರದು. ಮಾಂಸ ಮಾರಾಟಗಾರರು ಗೂಂಡಾಗಿರಿ ಮಾಡುತ್ತಾರೆ. ವಸತಿ ಪ್ರದೇಶಗಳಲ್ಲಿನ ಮಾಂಸದ ಅಂಗಡಿಗಳನ್ನು ಮುಚ್ಚಬೇಕೆಂದು ನಾವು ಪತ್ರ ಬರೆಯುತ್ತೇವೆ” ಎಂದಿದ್ದಾರೆ.
ನವರಾತ್ರಿಯ ಸಮಯದಲ್ಲಿ ಮಾತ್ರವಲ್ಲ, ವರ್ಷಪೂರ್ತಿ ವಸತಿ ಪ್ರದೇಶಗಳಲ್ಲಿ ಮಾಂಸದ ಅಂಗಡಿಗಳಿಗೆ ಅನುಮತಿ ನೀಡಬಾರದು ಎಂದು ಬಸೋಯಾ ಹೇಳಿದ್ದಾರೆ. ಮಟನ್ ಅಂಗಡಿಗಳೆಲ್ಲ ವಾಣಿಜ್ಯ ವಲಯಗಳಿಗೆ ಸೀಮಿತವಾಗಿರಬೇಕು ಎಂದಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಂಸದ ಅಂಗಡಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷವು ಅಧಿಕಾರದಲ್ಲಿದ್ದಾಗ ಇದಕ್ಕೆಲ್ಲ ಉತ್ತೇಜನ ನೀಡಿದ್ದರು ಎಂದೂ ಅವರು ಆರೋಪಿಸಿದ್ದಾರೆ.
“ನಾನು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರು ಮತ್ತು ದೆಹಲಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು, ನಗರದಲ್ಲಿ ಮಟನ್ ಅಂಗಡಿಗಳನ್ನು ಮುಚ್ಚಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ” ಎಂದೂ ಬಸೋಯಾ ಹೇಳಿದ್ದಾರೆ.