‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾದ ಬಿಡುಗಡೆ ದಿನಾಂಕ ಹತ್ತಿರ ಆಗಿದೆ. ಡಿಸೆಂಬರ್ 11ರಂದು ಈ ಸಿನಿಮಾ ತೆರೆ ಕಾಣಲಿದೆ. ಸದ್ಯಕ್ಕೆ ದರ್ಶನ್ ಅವರು ಕೊಲೆ ಆರೋಪಿಯಾಗಿ ಜೈಲುವಾಸ ಅನುಭವಿಸುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ.
ಹಲವು ಕಡೆಗಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಈ ಸಮಯದಲ್ಲಿ ದರ್ಶನ್ ಲಭ್ಯವಿದ್ದಿದ್ದರೆ ಅದ್ದೂರಿಯಾಗಿ ಪ್ರಚಾರ ಮಾಡಲಾಗುತ್ತಿತ್ತು. ಆದರೆ ಅವರು ಇಲ್ಲದ ಕಾರಣ ಪ್ರಚಾರಕ್ಕೆ ಕೊಂಚ ಹಿನ್ನಡೆ ಆಗಿರಬಹುದಾ ಎಂಬ ಪ್ರಶ್ನೆಗೆ ಸುಮಲತಾ ಅಂಬರೀಷ್ ಅವರು ಉತ್ತರಿಸಿದ್ದಾರೆ.
ಇಂದು (ನ.24) ಅಂಬರೀಷ್ ಅವರ ಪುಣ್ಯಸ್ಮರಣೆ. ಈ ವೇಳೆ ಮಾಧ್ಯಮಗಳ ಜೊತೆ ಸುಮಲತಾ ಅಂಬರೀಷ್ ಮಾತನಾಡಿದ್ದು, ‘ಆಗಿ ಹೋಗಿರುವ ವಿಷಯದ ಬಗ್ಗೆ ಮಾತನಾಡಿದರೆ ಈಗ ಏನೂ ಪ್ರಯೋಜನ ಇಲ್ಲ. ಮುಂದೆ ಒಳ್ಳೆಯದಾಗಲಿ ಅಂತ ಹಾರೈಸೋಣ. ಡೆವಿಲ್ ಸಿನಿಮಾ ತಂಡದವರು ಪ್ರಚಾರ ಸರಿಯಾಗಿಯೇ ಮಾಡುತ್ತಿದ್ದಾರೆ ಎನಿಸುತ್ತದೆ. ಯಾವತ್ತೂ ನಾನು ಸಿನಿಮಾ ಪ್ರಚಾರಕ್ಕೆ ನೇರವಾಗಿ ಪಾಲ್ಗೊಂಡಿರಲ್ಲ. ನಾನು ದರ್ಶನ್ ಅವರ ಹಿತೈಶಿ. ಆ ಸಿನಿಮಾ ಖಂಡಿತವಾಗಿಯೂ ಯಶಸ್ವಿ ಆಗಬೇಕು ಎಂಬುದು ನನ್ನ ಹಾರೈಕೆ’ ಎಂದು ಸುಮಲತಾ ಅಂಬರೀಷ್ ಅವರು ಹೇಳಿದ್ದಾರೆ.
‘ದರ್ಶನ್ ಅವರಿಗೆ ಒಳ್ಳೆಯದೇ ಆಗಬೇಕು ಅಂತ ನಾವೆಲ್ಲರೂ ಹಾರೈಸುತ್ತೇನೆ. ಈಗ ಅವರು ಒಂದು ಸವಾಲಿನ ಪರಿಸ್ಥಿತಿಯಲ್ಲಿ ಇದ್ದಾರೆ. ಸತ್ಯವನ್ನು ಯಾರೂ ಕೂಡ ಶಾಶ್ವತವಾಗಿ ಮುಚ್ಚಿಡಲು ಸಾಧ್ಯವಿಲ್ಲ. ದೇವರಿದ್ದಾನೆ, ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಅವರ ಅಭಿಮಾನಿಗಳು ಡೆವಿಲ್ ಸಿನಿಮಾಗಾಗಿ ಕಾತರದಿಂದ ಕಾಯುತ್ತಿದ್ದಾರೆ. ನಾವು ಕೂಡ ಕಾಯುತ್ತಿದ್ದೇವೆ’ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣದ ಪ್ರಮುಖ ಆರೋಪಿ ಚಿನ್ನಯ್ಯನಿಗೆ ಜಾಮೀನು ಮಂಜೂರು



















