ನರೇಂದ್ರ ಮೋದಿ ಸರ್ಕಾರವು ಕಳೆದ 10 ವರ್ಷಗಳಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆಗಳ ಮೂಲಕ ರಕ್ಷಣಾ ಕ್ಷೇತ್ರಕ್ಕೆ ಸೂಪರ್ ಪವರ್ ನೀಡಿದೆ. ಇದರ ಫಲವಾಗಿಯೇ ದೇಶೀಯವಾಗಿಯೇ ಶಸ್ತ್ರಾಸ್ತ್ರಗಳು ಹಾಗೂ ಯುದ್ಧವಿಮಾನಗಳನ್ನು ಉತ್ಪಾದಿಸುತ್ತಿದ್ದು, ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ. ಅಷ್ಟೇ ಅಲ್ಲ, ರಕ್ಷಣಾ ಸಲಕರಣೆಗಳು, ಯುದ್ಧವಿಮಾನಗಳನ್ನು ಈಗ ಭಾರತ ವಿದೇಶಕ್ಕೆ ರಫ್ತು ಮಾಡುವ ಪ್ರಮಾಣವು 10 ಪಟ್ಟು ಜಾಸ್ತಿಯಾಗಿದೆ. ಹಾಗಾಗಿ, ರಕ್ಷಣಾ ಕ್ಷೇತ್ರದಲ್ಲೂ ಭಾರತ ಆತ್ಮನಿರ್ಭರತೆ ಸಾಧಿಸಿದಂತಾಗಿದೆ.
ಹೌದು…!ರಕ್ಷಣಾ ಕ್ಷೇತ್ರದ ಮ್ಯಾನುಫ್ಯಾಕ್ಚರಿಂಗ್ ಕುರಿತು ಖುದ್ದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೇ ಮಾಹಿತಿ ನೀಡಿದ್ದಾರೆ. ಕಳೆದ 10 ವರ್ಷಗಳಲ್ಲಿ ದೇಶದ ರಕ್ಷಣಾ ಸಾಮಗ್ರಿಗಳ ರಫ್ತು 10 ಪಟ್ಟು ಜಾಸ್ತಿಯಾಗಿದೆ. ಈಗ 21 ಸಾವಿರ ಕೋಟಿ ರೂ. ಮೊತ್ತದ ಶಸ್ತ್ರಾಸ್ತ್ರಗಳನ್ನು ನಾವು ರಫ್ತು ಮಾಡುತ್ತಿದ್ದೇವೆ. 10 ವರ್ಷಗಳ ಹಿಂದೆ ರಫ್ತಿನ ಪ್ರಮಾಣವು 2 ಸಾವಿರ ಕೋಟಿ ರೂ. ಇತ್ತು. 2029ರೊಳಗೆ ಇದನ್ನು 50 ಸಾವಿರ ಕೋಟಿ ರೂ. ಗಡಿ ದಾಟಿಸುವ ಯೋಜನೆ ಇದೆ ಎಂದು ತಿಳಿಸಿದ್ದಾರೆ.
ಸರಕಾರಿ-ಖಾಸಗಿ ಸಹಭಾಗಿತ್ವ, ಮೇಕ್ ಇನ್ ಇಂಡಿಯಾ, ಆತ್ಮನಿರ್ಭರ ಭಾರತದಂತಹ ಯೋಜನೆ, ಉಪಕ್ರಮಗಳಿಂದಾಗಿ ದೇಶದ ರಕ್ಷಣಾ ಕ್ಷೇತ್ರವು ಸ್ವಾವಲಂಬಿಯಾಗುತ್ತಿದೆ. ದೇಶದಲ್ಲೀಗ ಒಟ್ಟು 1.3 ಲಕ್ಷ ಕೋಟಿ ರೂ. ಮೌಲ್ಯದ ರಕ್ಷಣಾ ಶಸ್ತ್ರಾಸ್ತ್ರಗಳನ್ನು ಉತ್ಪಾದನೆ ಮಾಡಲಾಗುತ್ತಿದೆ. ಇದನ್ನು2025-26ನೇ ಸಾಲಿನಲ್ಲಿ1.75 ಲಕ್ಷ ಕೋಟಿ ರೂ.ಗೆ ಏರಿಕೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಹಾಗಾಗಿ, ಮುಂದಿನ ವರ್ಷಗಳಲ್ಲಿ ರಕ್ಷಣಾ ಕ್ಷೇತ್ರವು ಇನ್ನಷ್ಟು ಬಲಿಷ್ಠವಾಗಲಿದೆ ಎಂದೇ ಹೇಳಲಾಗುತ್ತಿದೆ.
ರಕ್ಷಣಾ ಕ್ಷೇತ್ರದ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಗೂ ಅವಕಾಶ ನೀಡಿದೆ. ಅಷ್ಟೇ ಅಲ್ಲ, 2024-25ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ 6.21 ಲಕ್ಷ ಕೋಟಿ ರೂ. ಬಜೆಟ್ ಮೀಸಲಿಟ್ಟಿದೆ. ಇದು ದೇಶದ ಒಟ್ಟು ಜಿಡಿಪಿಯ ಶೇ.2.8ರಷ್ಟು ಆಗಿದೆ. ಸತತವಾಗಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಬಜೆಟ್ ಮೀಸಲಿಡುತ್ತಿರುವ ಕಾರಣ ಉತ್ಪಾದನೆ ಹೆಚ್ಚಾಗುತ್ತಿದೆ. ಜಾಗತಿಕ ಗುಣಮಟ್ಟದಲ್ಲೇ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಮಾಡುತ್ತಿರುವುದು ಕೂಡ ಪ್ಲಸ್ ಪಾಯಿಂಟ್ ಆಗಿದೆ.
ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದ ಯುದ್ಧ ವಿಮಾನ, ನೌಕಾ ಸಿಸ್ಟಮ್ಸ್, ಕ್ಷಿಪಣಿ ತಂತ್ರಜ್ಞಾನ, ಮಿಲಿಟರಿ ಹಾರ್ಡ್‌ವೇರ್ ಸೇರಿ ಹತ್ತಾರು ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಲಾಗುತ್ತಿದೆ. ಧನುಷ್ ಆರ್ಟಿಲರಿ ಗನ್ ಸಿಸ್ಟಮ್, ಎಟಿಎಜಿಎಸ್ ಗನ್ಸ್, ಮೇನ್ ಬ್ಯಾಟಲ್ ಟ್ಯಾಂಕ್ ಅರ್ಜುನ್, ಎಲ್‌ಸಿಎ ತೇಜಸ್ ಲಘು ಯುದ್ಧವಿಮಾನ, ಸಮರನೌಕೆಗಳು, ಇತ್ತೀಚೆಗೆ ನೌಕಾಪಡೆ ಸೇರಿದ ಐಎನ್‌ಎಸ್ ವಿಕ್ರಾಂತ್ ಸೇರಿ ಹಲವು ಯುದ್ಧವಿಮಾನ, ನೌಕೆ, ಸಲಕರಣೆಗಳನ್ನು ದೇಶೀಯವಾಗಿಯೇ ಉತ್ಪಾದನೆ ಮಾಡಲಾಗುತ್ತಿದೆ.
ಒಟ್ಟಿನಲ್ಲಿ, ದೇಶದ ರಕ್ಷಣೆಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳ ಉತ್ಪಾದನೆ ಜತೆಗೆ ವಿದೇಶಕ್ಕೂ ರಫ್ತು ಮಾಡುವ ಮಟ್ಟಿಗೆ ಭಾರತ ಬೆಳೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಉಗ್ರವಾದದ ವಿರುದ್ಧದ ಹೋರಾಟಕ್ಕೂ ಇದು ಬಲ ತುಂಬಲಿದೆ.