ಮುಂಬೈ: ಛತ್ರಪತಿ ಸಂಭಾಜಿ ಮಹರಾಜ್ ಕುರಿತು ಆಕ್ಷೇಪಾರ್ಹ ವಿಷಯವನ್ನು ಎನ್ಸೈಕ್ಲೋಪೀಡಿಯಾದಿಂದ ತೆಗೆದು ಹಾಕದ ಕಾರಣಕ್ಕೆ ವಿಕಿಪೀಡಿಯಾದ ನಾಲ್ವರು ಸಂಪಾದಕರ ವಿರುದ್ಧ ಮಹಾರಾಷ್ಟ್ರದ ಸೈಬರ್ ಘಟಕವು ಪ್ರಕರಣ ದಾಖಲಿಸಿದೆ.
ಅವಹೇಳನಕಾರಿ ಕಂಟೆಂಟ್ ಅನ್ನು ತೆಗೆದುಹಾಕುವಂತೆ ಕೋರಿ ಕ್ಯಾಲಿಫೋರ್ನಿಯಾ ಮೂಲದ ವಿಕಿಮೀಡಿಯಾ ಫೌಂಡೇಶನ್ಗೆ ಸೈಬರ್ ಘಟಕವು ನೋಟಿಸ್ ಕಳುಹಿಸಿತ್ತು. ಆದರೆ ನೋಟಿಸ್ಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ವಿಕಿಮೀಡಿಯಾ ಫೌಂಡೇಶನ್ ಎನ್ನುವುದು ಲಾಭರಹಿತ ಸಂಸ್ಥೆಯಾಗಿದ್ದು, ವಿಕಿಪೀಡಿಯಾವನ್ನು ಇದುವೇ ನಿರ್ವಹಿಸುತ್ತದೆ.
ಮರಾಠ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಪುತ್ರರಾಗಿರುವ ಸಂಭಾಜಿ ಮಹಾರಾಜರನ್ನು ಭಾರತದಲ್ಲಿ ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಹೀಗಿರುವಾಗ ವಿಕಿಪೀಡಿಯಾದಲ್ಲಿ ಅವರ ಕುರಿತು ಆಕ್ಷೇಪಾರ್ಹ ಮಾಹಿತಿ ಪ್ರಕಟಿಸಿರುವುದರಿಂದ, ಅದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂಥ ಪರಿಸ್ಥಿತಿಯನ್ನು ತಂದೊಡ್ಡುವ ಸಾಧ್ಯತೆಯಿದೆ. ಅಲ್ಲದೇ ಸಂಭಾಜಿ ಮಹರಾಜರ ಅನುಯಾಯಿಗಳು ಕೂಡ ಆಕ್ರೋಶಕ್ಕೊಳಗಾಗುವ ಸಾಧ್ಯತೆಯಿದೆ. ಹೀಗಾಗಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸೂಚನೆಗೆ ಮೇರೆಗೆ ನಾವು ಈ ನೋಟಿಸ್ ಅನ್ನು ಕಳುಹಿಸುತ್ತಿದ್ದು, ಕೂಡಲೇ ಆಕ್ಷೇಪಾರ್ಹ ಮಾಹಿತಿಯನ್ನು ತೆಗೆದುಹಾಕುವಂತೆ ಕೋರುತ್ತಿದ್ದೇವೆ ಎಂದು ವಿಕಿಮೀಡಿಯಾಗೆ ಕಳುಹಿಸಿದ ನೋಟಿಸ್ ನಲ್ಲಿ ಸೈಬರ್ ಘಟಕವು ತಿಳಿಸಿತ್ತು.

ಆದರೆ, ಪ್ರಕಟಿತ ಮಾಹಿತಿ ತೆಗೆದುಹಾಕುವ ಅಥವಾ ತೆಗೆದುಹಾಕಿರುವ ಕುರಿತು ವಿಕಿಮೀಡಿಯಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅನ್ವಯ ನಾಲ್ಕು ಮಂದಿ ವಿಕಿಪೀಡಿಯಾ ಸಂಪಾದಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿಕಿಪೀಡಿಯಾ ಎನ್ನುವುದು ಉಚಿತವಾಗಿ ಲಭ್ಯವಿರುವ ವಿಶ್ವಕೋಶವಾಗಿದ್ದು, ಇದನ್ನು ಸ್ವಯಂಸೇವಕ ಸಮುದಾಯದ ಸಹಕಾರದ ಮೂಲಕ ನಿರ್ಮಿಸಲಾಗಿದೆ ಹಾಗೂ ನಿರ್ವಹಿಸಲಾಗುತ್ತದೆ. ಈ ವೇದಿಕೆಯಲ್ಲಿ ನಿರ್ದಿಷ್ಟ ವ್ಯಕ್ತಿಗಳು ಯಾವುದೇ ವಿಷಯವನ್ನು ಅಪ್ಲೋಡ್ ಮಾಡಬಹುದು, ಜೊತೆಗೆ ಎಡಿಟ್ ಕೂಡ ಮಾಡಬಹುದಾಗಿದೆ.
ಇತ್ತೀಚೆಗೆ ಸಂಭಾಜಿ ಮಹಾರಾಜರ ಜೀವನಾಧಾರಿತ ಹಿಂದಿ ಚಲನಚಿತ್ರ ‘ಛಾವಾ’ ಬಿಡುಗಡೆಯಾಗಿದ್ದು, ಇದರ ಬೆನ್ನಲ್ಲೇ ಸಂಭಾಜಿ ಕುರಿತು ವಿಕಿಪೀಡಿಯಾದಲ್ಲಿ ಆಕ್ಷೇಪಾರ್ಹ ಮಾಹಿತಿಯಿರುವ ಬಗ್ಗೆ ಅನೇಕರು ಧ್ವನಿಯೆತ್ತಿದ್ದರು. ಇತಿಹಾಸವನ್ನು ತಿರುಚಲಾಗಿದೆ ಎಂದೂ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಫಡ್ನವೀಸ್, ಸಂಭಾಜಿ ಕುರಿತ ಇತಿಹಾಸವನ್ನು ತಿರುಚುವುದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದರು.