ನವದೆಹಲಿ: ಬಾಲಿವುಡ್‌ನ ತಾರಾ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ಇದೇ ಮೊದಲ ಬಾರಿಗೆ ತಮ್ಮ ಪುತ್ರಿ ದುವಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದ ಅಂಗವಾಗಿ, ದಂಪತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಜಂಟಿಯಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ತಾರಾ ಜೋಡಿ ಹಂಚಿಕೊಂಡಿರುವ ಫೋಟೋಗಳಲ್ಲಿ ರಣವೀರ್ ಸಿಂಗ್ ಆಫ್-ವೈಟ್ ಕುರ್ತಾ ಮತ್ತು ಮ್ಯಾಚಿಂಗ್ ಕೋಟ್ ಧರಿಸಿದ್ದರೆ, ದೀಪಿಕಾ ಪಡುಕೋಣೆ ಕೆಂಪು ಬಣ್ಣದ ಸೂಟ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ತಾಯಿಯಂತೆಯೇ ಕೆಂಪು ಉಡುಗೆ ಧರಿಸಿದ್ದ ಪುಟಾಣಿ ದುವಾ, ಕ್ಯಾಮೆರಾಕ್ಕೆ ಮುದ್ದಾಗಿ ನಗುತ್ತಾ ಪೋಸ್ ನೀಡಿದ್ದಾಳೆ. ದೀಪಿಕಾ ಮಗಳನ್ನು ಎತ್ತಿಕೊಂಡಿದ್ದರೆ, ರಣವೀರ್ ಇಬ್ಬರನ್ನೂ ಅಪ್ಪಿಕೊಂಡಿರುವ ಫೋಟೋಗಳು ಅಭಿಮಾನಿಗಳ ಮನಗೆದ್ದಿವೆ. ಮತ್ತೊಂದು ಫೋಟೋದಲ್ಲಿ ದೀಪಿಕಾ ಮತ್ತು ದುವಾ ದೀಪಾವಳಿ ಪೂಜೆಯಲ್ಲಿ ನಿರತರಾಗಿರುವುದು ಕಂಡುಬಂದಿದೆ.
ದೀಪಿಕಾ ಅವರು ಈ ಪೋಸ್ಟ್‌ಗೆ “ದೀಪಾವಳಿಯ ಹಾರ್ದಿಕ ಶುಭಾಶಯಗಳು” ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋಗಳಿಗೆ ಸೆಲೆಬ್ರಿಟಿಗಳಿಂದ ಮತ್ತು ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ನಟಿ ಹನ್ಸಿಕಾ ಮೋಟ್ವಾನಿ “ಬಹಳ ಮುದ್ದು” ಎಂದು ಕಾಮೆಂಟ್ ಮಾಡಿದರೆ, ರಾಜ್‌ಕುಮಾರ್ ರಾವ್ “ತುಂಬಾ ಮುದ್ದಾಗಿದೆ, ದೇವರು ನಿಮ್ಮನ್ನು ಆಶೀರ್ವದಿಸಲಿ” ಎಂದು ಬರೆದಿದ್ದಾರೆ. ಅನನ್ಯಾ ಪಾಂಡೆ ಮತ್ತು ರಿಯಾ ಕಪೂರ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು 2018ರ ನವೆಂಬರ್ 14ರಂದು ಇಟಲಿಯ ಲೇಕ್ ಕೊಮೊದಲ್ಲಿ ವಿವಾಹವಾಗಿದ್ದರು. ಕೊಂಕಣಿ ಮತ್ತು ಸಿಂಧಿ ಸಂಪ್ರದಾಯಗಳ ಪ್ರಕಾರ ಇವರ ವಿವಾಹ ನಡೆದಿತ್ತು. 2013ರಲ್ಲಿ ತೆರೆಕಂಡ ಗೋಲಿಯೋನ್ ಕಿ ರಾಸಲೀಲಾ ರಾಮ್-ಲೀಲಾ ಚಿತ್ರದ ಸೆಟ್‌ನಲ್ಲಿ ಇವರ ಪ್ರೇಮಕಥೆ ಆರಂಭವಾಗಿತ್ತು. ಈ ಜೋಡಿಗೆ 2024ರ ಸೆಪ್ಟೆಂಬರ್ 8ರಂದು ಪುತ್ರಿ ದುವಾ ಜನಿಸಿದ್ದಳು.