ಮುಂಬೈ: ನಾನು ಮತ್ತು ನಟಿ ದೀಪಿಕಾ ಪಡುಕೋಣೆ 2 ವರ್ಷಗಳ ಕಾಲ ಸಂಬಂಧದಲ್ಲಿದ್ದೆವು ಎಂದು ಭಾರತದ ಮಾಡೆಲ್ ಮತ್ತು ನಟ ಮುಜಮ್ಮಿಲ್ ಇಬ್ರಾಹಿಂ ಹೊಸ ಬಾಂಬ್ ಸಿಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಮುಜಮ್ಮಿಲ್ ಈ ವಿಚಾರವನ್ನು ಬಹಿರಂಗಪಡಿಸಿದ್ದು, ತಮ್ಮ ಆರಂಭಿಕ ದಿನಗಳಲ್ಲಿ ಬಾಲಿವುಡ್ನ ಸೂಪರ್ಸ್ಟಾರ್ ದೀಪಿಕಾ ಪಡುಕೋಣೆ ಜೊತೆ ಎರಡು ವರ್ಷಗಳ ಕಾಲ ಪ್ರೀತಿಯ ಸಂಬಂಧದಲ್ಲಿದ್ದೆ ಎಂದಿದ್ದಾರೆ. ದೀಪಿಕಾ ಮುಂಬೈಗೆ ಮಾಡೆಲಿಂಗ್ ವೃತ್ತಿಯನ್ನು ಆರಂಭಿಸಲೆಂದು ಬಂದಾಗ ಈ ಸಂಬಂಧ ಆರಂಭವಾಯಿತು ಎಂದೂ ತಿಳಿಸಿದ್ದಾರೆ.
ಸಿದ್ಧಾರ್ಥ್ ಕಣ್ಣನ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಮುಜಮ್ಮಿಲ್, “ನಾವು ಎರಡು ವರ್ಷಗಳ ಕಾಲ ಸಂಬಂಧದಲ್ಲಿದ್ದೆವು. ದೀಪಿಕಾ ಮುಂಬೈಗೆ ಬಂದಾಗ ಭೇಟಿಯಾದ ಮೊದಲ ವ್ಯಕ್ತಿ ನಾನೇ ಆಗಿದ್ದೆ,” ಎಂದಿದ್ದಾರೆ. ದೀಪಿಕಾ, ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಅವರ ಪುತ್ರಿಯಾಗಿದ್ದರಿಂದ, ಆಗಲೇ ಜನರಿಗೆ ಚಿರಪರಿಚಿತರಾಗಿದ್ದರು. ಅವರು ತುಂಬಾ ಆತ್ಮವಿಶ್ವಾಸದಿಂದ ಮಾತನಾಡುತ್ತಿದ್ದರು. ದೀಪಿಕಾ ಅವರೇ ಮೊದಲು ನನಗೆ ಪ್ರಪೋಸ್ ಮಾಡಿದ್ದರು. ಆದರೆ ಎರಡು ವರ್ಷಗಳ ನಂತರ ನಾನೇ ಆ ಸಂಬಂಧವನ್ನು ಕೊನೆಗೊಳಿಸಿದೆ,” ಎಂದು ಹೇಳಿದ್ದಾರೆ.
ಆ ಸಮಯದಲ್ಲಿ ಮುಜಮ್ಮಿಲ್ ಗ್ಲಾಡ್ರಾಗ್ಸ್ ಮ್ಯಾನ್ಹಂಟ್ ಸ್ಪರ್ಧೆಯನ್ನು ಗೆದ್ದು ಖ್ಯಾತಿ ಗಳಿಸಿದ್ದರು. ಆದರೆ ದೀಪಿಕಾ ಇನ್ನೂ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಂಡಿರಲಿಲ್ಲ. “ಆಗ ನಾನು ಸ್ಟಾರ್ ಆಗಿದ್ದೆ, ಆದರೆ ದೀಪಿಕಾ ಇನ್ನೂ ಸ್ಟಾರ್ ಆಗಿರಲಿಲ್ಲ. ಈಗ ದೀಪಿಕಾ ಸೂಪರ್ಸ್ಟಾರ್. ಎಲ್ಲರಿಗೂ ಅವರ ಬಗ್ಗೆ ಗೊತ್ತು. ಆದರೆ ನಾನು ಯಾರೆಂದೂ ಈಗ ಯಾರಿಗೂ ತಿಳಿದಿಲ್ಲ. ನಾನು ದೀಪಿಕಾರ ದೊಡ್ಡ ಅಭಿಮಾನಿ. ಅವರ ಸಿನಿಮಾಗಳನ್ನು ಇಷ್ಟಪಡುತ್ತೇನೆ. ಅವರೊಬ್ಬ ಸುಂದರ ಮಹಿಳೆ,” ಎಂದು ಮುಜಮ್ಮಿಲ್ ದೀಪಿಕಾರ ಯಶಸ್ಸನ್ನು ಕೊಂಡಾಡಿದ್ದಾರೆ.

ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡಿರುವ ಮುಜಮ್ಮಿಲ್, “ನಾವಿಬ್ಬರೂ ಆಗ ಚಿಕ್ಕವರಾಗಿದ್ದೆವು. ಹಣದ ಕೊರತೆಯಿದ್ದ ಕಾರಣ ಆಟೋರಿಕ್ಷಾದಲ್ಲಿ ಡೇಟಿಂಗ್ ಹೋಗುತ್ತಿದ್ದೆವು. ಮಳೆಯಲ್ಲಿ ನೆನೆಯುತ್ತಾ ಸಾಗುವುದೆಂದರೆ ನಮಗಿಬ್ಬರೂ ಬಹಳ ಇಷ್ಟ. ಅದು ತುಂಬಾ ಮುದ ನೀಡುವ ಸಂಗತಿಯಾಗಿತ್ತು,” ಎಂದು ಹೇಳಿದ್ದಾರೆ. ದೀಪಿಕಾರ ಜನ್ಮದಿನದಂದು, ಮುಜಮ್ಮಿಲ್ ತಮ್ಮ ಸ್ನೇಹಿತನಾದ ಡಿಜೆಯೊಬ್ಬರಿಗೆ ದೀಪಿಕಾರ ಇಷ್ಟದ ಗೀತೆಯನ್ನು ಒಂದೂವರೆ ಗಂಟೆಗಳ ಕಾಲ ಹಾಡಿಸಿದ್ದರಂತೆ. ನನ್ನ ಬಳಿ ಹೆಚ್ಚು ಹಣ ಇರಲಿಲ್ಲ, ಆದರೆ ಡಿಜೆ ನನ್ನ ಸ್ನೇಹಿತನಾಗಿದ್ದರಿಂದ ಆ ಹಾಡನ್ನು ಅಷ್ಟು ಹೊತ್ತು ಹಾಡಿಸಿದೆ. ಅಂದು ದೀಪಿಕಾ ಬಹಳ ಖುಷಿ ಪಟ್ಟರು,” ಎಂದು ಅವರು ನೆನಪಿಸಿಕೊಂಡಿದ್ದಾರೆ.
ಮದುವೆಯ ನಂತರ ಸಂಪರ್ಕಿಸಲಿಲ್ಲ
ನಮ್ಮ ಸಂಬಂಧ ಮುರಿದುಬಿದ್ದ ಬಳಿಕ ಕೆಲವು ವರ್ಷಗಳ ಕಾಲ ನಾವಿಬ್ಬರೂ ಮಾತುಕತೆ ನಡೆಸಿರಲಿಲ್ಲ. ಆದರೆ ಕೆಲವು ವರ್ಷಗಳ ನಂತರ ಮತ್ತೆ ಸಂಪರ್ಕಕ್ಕೆ ಬಂದೆವು. “ನಾವು ಒಬ್ಬರಿಗೊಬ್ಬರು ಯಶಸ್ಸಿನ ಸಂದರ್ಭದಲ್ಲಿ ಅಭಿನಂದನೆ ಸಂದೇಶ ಕಳುಹಿಸುತ್ತಿದ್ದೆವು. ಆದರೆ 2018ರಲ್ಲಿ ದೀಪಿಕಾ ಅವರು ರಣವೀರ್ ಸಿಂಗ್ ಅವರನ್ನು ಮದುವೆಯಾದ ನಂತರ ನಾವು ಸಂಪರ್ಕ ಕಳೆದುಕೊಂಡೆವು,” ಎಂದು ಅವರು ತಿಳಿಸಿದ್ದಾರೆ.
ಮುಜಮ್ಮಿಲ್ ಇಬ್ರಾಹಿಂ ಯಾರು?
ಮುಜಮ್ಮಿಲ್ ಇಬ್ರಾಹಿಂ 1986ರ ಆಗಸ್ಟ್ 25ರಂದು ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದವರು. 2003ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಲ್ಪಟ್ಟರು. 2007ರಲ್ಲಿ ಪೂಜಾ ಭಟ್ ನಿರ್ಮಾಣದ “ಧೋಕಾ” ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು, ಇದಕ್ಕಾಗಿ 53ನೇ ಫಿಲ್ಮ್ಫೇರ್ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚೊಚ್ಚಲ ನಟನಿಗೆ ನಾಮನಿರ್ದೇಶನಗೊಂಡರು. ಇದಾದ ನಂತರ “ವಿಲ್ ಯೂ ಮ್ಯಾರಿ ಮೀ?” ಮತ್ತು ವೆಬ್ ಸರಣಿ “ಸ್ಪೆಷಲ್ ಆಪ್ಸ್”ಗಳಲ್ಲಿ ನಟಿಸಿದ್ದಾರೆ. ಇವರು ಎರಡು ಬಾರಿ ಶೌರ್ಯ ಪ್ರಶಸ್ತಿಯನ್ನೂ ಗಳಿಸಿದ್ದಾರೆ.