ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ ದೀಪಾವಳಿ. ಇದನ್ನು ವಿಕ್ರವಶಕೆಯ ವರ್ಷದ ಕೊನೆಯಲ್ಲಿಆಚರಿಸಲಾಗುತ್ತದೆ.ವಿಕ್ರಮಶಕೆ ಉತ್ತರಭಾರತದಲ್ಲಿ ಉಪಯೋಗಿಸಲ್ಪಡುವುದರಿಂದಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು. ಭಾರತದಲ್ಲಿ ಸಾಂಪ್ರದಾಯಿಕವಾಗಿ ಪಚಾಂಗ ಚಂದ್ರಮಾನವನ್ನು ಅವಲಂಬಿಸಿವೆ. ಅಂದರೆ ಆಶ್ವಯುಜ ಮಾಸ ಕೃಷ್ಣ ಪಕ್ಷದ ಚತುರ್ದಶಿ, ಅಮಾವಾಸ್ಯೆ ಹಾಗೂ ಕಾರ್ತಿಕಾ ಮಾಸ ಶುಕ್ಲ ಪಕ್ಷದ ಪಾಡ್ಯ ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದೆ.
ನರಕ ಚತುರ್ದಶಿ ಹಬ್ಬವನ್ನು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ವಿಶೇಷ ದಿನವು ಅನೇಕ ಧಾರ್ಮಿಕ ಆಚರಣೆಗಳು, ನಂಬಿಕೆಗಳ ಪ್ರತೀಕವಾಗಿದ್ದು, ಹಿಂದೂ ಧರ್ಮದಲ್ಲಿ ಬಹಳ ಪ್ರಾಮುಖ್ಯತೆ ಇದೆ. ದಕ್ಷಿಣ ಬಾರತದದಲ್ಲಿ, ರಾಕ್ಷಸ ನರಕಾಸುರನ ಮೇಲೆ ಶ್ರೀಕೃಷ್ಣನ ವಿಜಯದ ಗೌರವಾರ್ಥವಾಗಿ ದೀಪಾವಳಿಯನ್ನು ಆಚರಿಸಲಾಗುತ್ತದೆ. ಈ ದಿನವು ಅಂಧಕಾರದ ಮೇಲೆ ಬೆಳಕಿನ ವಿಜಯದ ಸಂಕೇತವಾಗಿದೆ. ಹಾಗಾದಲ್ಲಿ ನರಕ ಚತುರ್ದಶಿಯ ವಿಶೇಷತೆ ಏನು ಗೊತ್ತಾ? ಇಲ್ಲಿದೆ ಮಾಹಿತಿ.

ನರಕ ಚತುರ್ದಶಿ ವಿಶೇಷತೆ
ನರಕ ಚತುರ್ದಶಿ ಆಚರಣೆಯು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸಾಧೀಸುವ ಸಂಕೇತ. ಮುಖ್ಯವಾಗಿ ನರಕಾಸುರನ ಸಂಹಾರದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದ ವಿಶೇಷತೆ ಅಭ್ಯಂಜನ ಸ್ನಾನ (ಎಣ್ಣೆ ಸ್ನಾನ), ಯಮ ಮತ್ತು ಶ್ರೀಕೃಷ್ಣ ಪೂಜೆ ಹಾಗೂ ನಕಾರಾತ್ಮಕ ಶಕ್ತಿಗಳ ನಿವಾರಣೆಯು ಸೇರಿವೆ. ಈ ಸ್ನಾನವು ಪಾಪಗಳಿಂದ ಮುಕ್ತಿ ನೀಡುತ್ತದೆ ಎಂದು ಹಿಂದೂಗಳ ನಂಬಿಕೆ. ಮತ್ತು ದೀರ್ಘಾಯುಷ್ಯ, ಸಮೃದ್ಧಿ ಹಾಗೂ ಮಾನಸಿಕ ಶಾಂತಿಯನ್ನು ತರುತ್ತದೆ ಎಂಬ ವಾಡಿಕೆಯೂ ಇದೆ.
ನರಕ ಚತುರ್ದಶಿ ನಮ್ಮೊಳಗಿನ ಅಜ್ಞಾನ, ದ್ವೇಷ, ಕ್ರೋಧ ಮತ್ತು ಅಹಂಕಾರ ಎಂಬ ಅಂಧಕಾರವನ್ನು ನಾಶಮಾಡುವ ಹಾಗೂ ಜೀವನ ಶುದ್ಧೀಕರಣ ನವಜೀವನದ ಆರಂಭದ ದಿನವೆಂದು ಪರಿಗಣಿಸಲಾಗುತ್ತದೆ.

“ಪೌರಾಣಿಕ ಹಿನ್ನಲೆಯ ಪ್ರಕಾರ”
ಭೂಮಿತಾಯಿಯ ಮಗನಾಗಿರುವ ರಾಕ್ಷಸ ನರಕಾಸುರ ಹಲವಾರು ರಾಜ್ಯಗಳನ್ನು ಆಳುತ್ತಿದ್ದ. ಆತನ ಆಡಳಿತ ಅಹಿತಕರ ಘಟನೆಗಳು, ಕಪಟ, ಮೋಸ ಹಾಗೂ ದುರಾಡಳಿತದಿಂದ ಕೂಡಿತ್ತು. ಪ್ರಜೆಗಳ ಹಿತಾಸಕ್ತಿ ಹಾಗೂ ರಾಜ್ಯದ ಸುಭಿಕ್ಷೆಯನ್ನು ಪರಿಗಣಿಸದೆ ದುರಂಕಾರದಿಂದ ಆಡಳಿತ ನಡೆಸುತ್ತಿದ್ದ. ಒಮ್ಮೆ ಆತನ ನೀಚ ಕಣ್ಣು ಸ್ವರ್ಗದ ಮೇಲೆ ಬಿತ್ತು. ಅಲ್ಲಿ ತನ್ನ ಪಾರುಪತ್ಯ ಹಾಗೂ ಆಡಳಿತ ನಡೆಸಬೇಕು ಎಂಬ ಆಸೆಪಟ್ಟು ಅದಕ್ಕಾಗಿ ಸ್ವರ್ಗದ ಅಧಿಪತಿ ಇಂದ್ರನ ವಿರುದ್ಧ ಯುದ್ಧವನ್ನು ಸಾರಿದ. ಇಂದ್ರನು ವಿಷ್ಣು ದೇವನಲ್ಲಿ ಸಹಾಯ ಯಾಚಿಸಿದ. ಆಗ ವಿಷ್ಣು ಕೃಷ್ಣನ ಅವತಾರದಲ್ಲಿ ಬಂದು ಸಹಾಯ ಮಾಡುವುದಾಗಿ ಭರವಸೆ ನೀಡಿದೆ.
ಆದರೆ ಬ್ರಹ್ಮನಿಂದ ಅದಾಗಲೇ ಹೆಂಗಸರನ್ನು ಹೊರತುಪಡಿಸಿ ಯಾರಿಂದಲೂ ಸೋಲು ಹೊಂದಬಾರದು ಎಂಬ ವರವನ್ನು ನರಕಾಸುರ ಪಡೆದುಕೊಂಡಿದ್ದ. ಹಾಗಾಗಿ ಆತನನ್ನು ಮಣಿಸಲು ಭಗವಾನ್ ವಿಷ್ಣು ಕೃಷ್ಣನ ಅವತಾರ ಏತುತ್ತಾನೆ. ಸಾರ್ತಿ ಎಂದು ಕರೆಯಲ್ಪಡುವ ಗರುಡನನ್ನು ಕರೆದು, ಅವನ ಹೆಂಡತಿ ಸತ್ಯಭಾಮೆಯ ಮೂಲಕ ನರಕಾಸುರನನ್ನು ಸೋಲಿಸಿ, ನರಕಾಸುರನನ್ನು ವಧೆ ಮಾಡಲಾಗುತ್ತದೆ. ದುಷ್ಟತನವನ್ನು ಸಂಹಾರ ಮಾಡಿ ವಿಜಯವನ್ನು ಪಡೆದ ದಿನವಾದ್ದರಿಂದ ಗೆಲುವಿನ ಸಂಕೇತವಾಗಿ ಹಬ್ಬವನ್ನು ಆಚರಿಸುತ್ತಾರೆ. ಈ ದಿನವನ್ನು ವಿವಿಧ ರಾಜ್ಯದಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.
“ಅಭ್ಯಂಜನ ಸ್ನಾನ“
ನರಕ ಚತುರ್ದಶಿ ಹಬ್ಬ ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವಾದ್ದರಿಂದ ಈ ದಿನ ಮುಂಜಾನೇ ಬೇಗ ಎದ್ದು ಎಣ್ಣೆ ಸ್ನಾನ ಮಾಡಿದರೆ ಪವಿತ್ರ ಗಂಗಾ ಸ್ನಾನ ಮಾಡಿದಷ್ಟೇ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆಯಿದೆ.ಅಲ್ಲದೆ ಅಭ್ಯಂಗ ಸ್ನಾನ ಮನುಷ್ಯನ ಅಹಂಕಾರ, ಕೋಪ, ನಕಾರಾತ್ಮಕ ಆಲೋಚನೆಗಳನ್ನು ಶುದ್ಧೀಕರಣ ಮಾಡಿ ಹೊಸ ಭರವಸೆಯೊಂದಿಗೆ ದೇಹ ಮತ್ತು ಮನಸ್ಸಿನ ಶುದ್ಧತೆಯನ್ನು ಸೂಚಿಸುತ್ತದೆ. ಹಾಗಾಗಿ ಜನ ದೇಹ ಮತ್ತು ಮನಸ್ಸನ್ನು ಶುದ್ಧೀಕರಣಗೊಳಿಸಲು ಈ ದಿನ ಮುಂಜಾನೆ ಬೇಗ ಎದ್ದು ಶುಭ ಮುಹೂರ್ತದಲ್ಲಿ ಎಳ್ಳೆಣ್ಣೆ ಅಥವಾ ಕೊಬ್ಬರಿ ಎಣ್ಣೆಯನ್ನು ಸಂಪೂರ್ಣ ದೇಹಕ್ಕೆ ಹಚ್ಚಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ.

“ಪೂಜಾ ವಿಧಾನ”
ನರಕ ಚತುರ್ದಶಿಯಂದು ಸೂರ್ಯ ಉದಯಕ್ಕೂ ಮುನ್ನ ಎದ್ದು ಎಣ್ಣೆಯನ್ನು ಹಚ್ಚಿ ಸ್ನಾನ ಮಾಡಿ ಶುಭ್ರ ಬಟ್ಟೆಯನ್ನು ಧರಿಸಬೇಕು. ನಂತರ ಯಮರಾಜನ ವಾಮನ ರೂಪ, ಶ್ರೀ ಕೃಷ್ಣ, ಕಾಳಿ ಮಾತೆ, ಶಿವ, ಹನುಮಂತ ಮತ್ತು ವಿಷ್ಣುವಿನ ವಿಶೇಷ ಪೂಜೆಯನ್ನು ಮಾಡಬೇಕು. ಈ ಎಲ್ಲ ದೇವರ ವಿಗ್ರಹಗಳನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಟ್ಟು ವಿಧಿ – ವಿಧಾನಗಳ ಮೂಲಕ ಪೂಜಿಸಬೇಕು. ಧೂಪ ದೀಪಗಳನ್ನು ಬೆಳಗಿ, ಆರತಿ ಮಾಡಿ ದೇವರನ್ನು ಪ್ರಾಋಥಿಸುವುದು ಉತ್ತಮ.
ನರಕ ಚತುರ್ದಶಿ ದಿನದಂದು ಯಮ ದೇವನನ್ನು ಪೂಜಿಸುವುದರಿಂದ ಕುಟುಂಬದ ಪ್ರತಿಯೊಬ್ಬ ಸದಸ್ಯರು ಅಕಾಲಿಕ ಮರಣದಿಂದ ಮುಕ್ತಿಯನ್ನು ಪಡೆದುಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ.